ಸುಳ್ಯ: ಅನೇಕ ವರ್ಷಗಳ ಬಳಿಕ ವಿದ್ಯುತ್ ಸಮಸ್ಯೆ ನಿವಾರಣೆಯ ಕನಸು ಹತ್ತಿರವಾಗುತ್ತಿದೆ. ಸುಳ್ಯದ ಕಡೆಗೂ ನಿರಂತರ ವಿದ್ಯುತ್ ಭಾಗ್ಯ ಕಾಣುವಂತಾಗುತ್ತದೋ ಎಂಬ ನಿರೀಕ್ಷೆ ಹೆಚ್ಚಾಗಿದೆ. ಸುಳ್ಯ ಶಾಸಕರು ಎಲರ್ಟ್ ಆದಂತೆ ಕಾಣುತ್ತದೆ. ಹಾಗಾದರೆ ಮಾಡಾವು ವಿದ್ಯುತ್ ಸಬ್ ಸ್ಟೇಶನ್ ಆದರೆ ಏನು ಪ್ರಯೋಜನ, ಹೇಗಿದೆ ಈ ಯೋಜನೆ ?
ಈ ಯೋಜನೆ ಹೀಗಿದೆ :
ನೆಟ್ಲಮುಡ್ನೂರಿನಿಂದ ಮಾಡಾವಿಗೆ 110 ಕೆ ವಿ ವಿದ್ಯುತ್ ಲೈನ್ ಎಳೆಯುವ ಮೂಲಕ ಮಾಡಾವಿನಲ್ಲಿ ಸಬ್ ಸ್ಟೇಷನ್ ಆರಂಭವಾಗುತ್ತದೆ. ಮಾಡಾವಿನಿಂದ ಸುಳ್ಯ- ಕಡಬ ಹಾಗೂ ಆಲಂಕಾರಿಗೆ ವಿದ್ಯುತ್ ಸರಬರಾಜು ಮಾಡುವ ಯೋಜನೆ ಇದಾಗಿದೆ. ಕಬಕದಿಂದ ಮಾಡಾವು ತನಕ ಒಟ್ಟು 27 ಕಿ ಮೀ ದೂರದಲ್ಲಿ ಲೈನ್ ಎಳೆಯುವ ಕಾಮಗಾರಿ ನಡೆಯುತ್ತಿದೆ. ಒಟ್ಟು 107 ವಿದ್ಯುತ್ ಲೈನ್ ಟವರ್ ಗಳ ನಿರ್ಮಾಣ ಪ್ರಗತಿಯಲ್ಲಿದೆ.
ಮಾಡಾವಿನಲ್ಲಿ ಸಬ್ ಸ್ಟೇಷನ್ ಆರಂಭವಾದಲ್ಲಿ ಸುಳ್ಯ , ಆಲಂಕಾರು , ಕುಂಬ್ರ ಮತ್ತು ಕಡಬ ಭಾಗದಲ್ಲಿ ವಿದ್ಯುತ್ ವಿತರಣೆಗೆ ಮುಕ್ತ ಅವಕಾಶ ದೊರೆಯುತ್ತದೆ. ಬಳಿಕ ದಿನದ 24 ಗಂಟೆಯೂ ವಿದ್ಯುತ್ ಪೂರೈಸಲು ಇದು ಸಹಕಾರಿಯಾಗಲಿದೆ.
110 ಕೆವಿ ಲೈನ್ ಆಗಿರುವ ಕಾರಣ ಬೃಹತ್ ಆಕಾರದ ಟವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಒಂದೊಂದು ಟವರ್‍ಗೆ 7 ರಿಂದ 10 ಸೆಂಟ್ಸ್ ಭೂಮಿ ಬಳಕೆಯಾಗುತ್ತದೆ. 27 ಕಿ ಮೀ ನಲ್ಲಿ ಒಟ್ಟು 107 ಟವರ್ ಗಳ ನಿರ್ಮಾಣ ಕಾಮಗಾರಿ ಬಹುತೇಕ ಮಗಿದಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಯೋಜನೆಯಿಂದ ಏನು ಪ್ರಯೋಜನ?
ಈ ಯೋಜನೆ ಯಶಸ್ವಿಯಾದಲ್ಲಿ ಮಾಡಾವು, ಸುಳ್ಯ, ಆಲಂಕಾರು, ಕಡಬ ಮತ್ತು ಕುಂಬ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ವಿದ್ಯುತ್ ವಿತರಣೆಯಾಗುತ್ತದೆ. ಈಗಾಗಲೇ ಈ ಭಾಗದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಇದ್ದು ಅದಕ್ಕೆ ಪರಿಹಾರ ಕಾಣಲಿದೆ. ದಿನದ 24 ಗಂಟೆಯೂ ವಿದ್ಯುತ್ ನೀಡುವಲ್ಲಿ ಸಹಕಾರಿಯಾಗಲಿದೆ. ಈಗ ಸವಣೂರು ಉಪ ವಿದ್ಯುತ್ ಕೇಂದ್ರದ ಮೂಲಕ ಆಲಂಕಾರು,ಕಡಬ ಮೊದಲಾದೆಡೆ ಸರಬರಜಾಗುತ್ತಿದ್ದು ,ಮಾಡಾವು ಸಬ್‍ಸ್ಟೇಶನ್ ಪೂರ್ಣವಾಗಿ ಕಾರ್ಯಾರಂಭ ಮಾಡಿದರೆ ಸವಣೂರು ಉಪಕೇಂದ್ರ ವ್ಯಾಪ್ತಿಯ ವಿದ್ಯುತ್ ಸಮಸ್ಯೆಯೂ ನಿವಾರಣೆಯಾಗಲಿದೆ.
ಇನ್ನೇನು ಆಗಬೇಕು :
ಈಹ ಸಬ್ ಸ್ಟೇಶನ್ ಕೆಲಸ ಒಂದೆರಡು ತಿಂಗಳಲ್ಲಿ ಮುಗಿಯುತ್ತದೆ. ಕೆಲಸ ಇರುವುದು ನಂತರವೇ. ವಿದ್ಯುತ್ ತಂತಿ ಎಳೆಯುವ ಕೆಲಸ ನಡೆಯಬೇಕು. ಈಗಾಗಲೇ ಹಲವು ಕಡೆ ವಿರೋಧಗಳು ಇದೆ. ಇದಕ್ಕಾಗಿ ಶಾಸಕರು, ಸಂಸದರು ಜೊತೆಯಾಗಿ ಸೂಕ್ತ ಪರಿಹಾರ ಸೇರಿದಂತೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಸಿ ತಂತಿ ಎಳೆಯುವ ಕಾರ್ಯದ ಬಗ್ಗೆ ಗಮನಹರಿಸಿದರೆ ಮಾತ್ರವೇ ಸಬ್ ಸ್ಟೇಶನ್ ಚಾಲೂ ಆಗಲು ಸಾಧ್ಯ. ಕನಸುಗಳು ನನಸಾಗಲು ಸಾಧ್ಯ. ಈ ಕಾರ್ಯ ನಡೆಯಬೇಕು, ಶಾಸಕ ಅಂಗಾರ ಅವರು ಇದೇ ಆಸಕ್ತಿ ಅಲ್ಲೂ ವಹಿಸಲೇಬೇಕಿದೆ. ಹೀಗಾದರೆ ಮಾತ್ರವೇ ಸುಳ್ಯದಲ್ಲಿ ಬೆಳಕು ಮೂಡಲು ಸಾಧ್ಯ. ಇಲ್ಲದೇ ಇದ್ದಲ್ಲಿ ವಿದ್ಯುತ್ ಸಮಸ್ಯೆಗೆ ಮುಕ್ತಿ ಸಿಗದು.