ಮುಸ್ಲಿಂ ಸಮುದಾಯಕ್ಕೆ ಅಲ್ಲಾಹನು ನಿಶ್ಚಯಿಸಿದ ಎರಡು ಉತ್ಸವ ದಿವಸಗಳಾಗಿವೆ ಈದುಲ್ ಫಿತ್‍ರ್ ಮತ್ತು ಈದುಲ್ ಅಲ್‍ಹಾ. ರಂಝಾನಿನ ಶುಭವಿದಾಯದೊಂದಿಗೆ ಆಗಮಿಸುವ ಆಚರಣೆಯಾಗಿದೆ ಈದುಲ್ ಫಿತ್‍ರ್.
ದೀರ್ಘವಾದ ಒಂದು ತಿಂಗಳ ಕಾಲ ನಾವು ಆತ್ಮೀಯ ಉತ್ಕರ್ಷಕ್ಕೆ ಬೇಕಾಗಿರುವ ಭಗೀರಥ ಪ್ರಯತ್ನದಲ್ಲಿದ್ದೆವು. ಮಾನವಕುಲಕ್ಕೆ ವಿಜಯಾಕಾಂಕ್ಷೆ ಮತ್ತು ಮೋಕ್ಷವಾಗ್ದಾನವನ್ನು ನೀಡುತ್ತಾ ವಿಶುದ್ಧ ಖುರ್‍ಆನ್ ಅವತೀರ್ಣಗೊಂಡ ಪುಣ್ಯ ತಿಂಗಳಾಗಿದೆ ರಂಜಾನ್. ಈ ತಿಂಗಳಲ್ಲಿ ಅಲ್ಲಾಹನಿಗೆ ಕೃತಜ್ಞತಾಪೂರ್ವಕವಾಗಿ ನಾವು ವ್ರತವನ್ನಾಚರಿಸಿದೆವು. ನಮಾಜು, ಖುರ್‍ಆನ್ ಪಾರಾಯಣ, ಇಅïತಿಕಾಫ್, ದಾನ-ಧರ್ಮಗಳು, ದಿಕ್‍ರ್ ದುಆಗಳು ಮುಂತಾದ ಆರಾಧನೆಗಳಲ್ಲಿ ನಿರತರಾದೆವು. ಇವುಗಳೆಲ್ಲದರ ವಿಜಯಪ್ರದವಾದ ಪೂರ್ತೀಕರಣದಲ್ಲಿ ಸಂತೋಷ ಪ್ರಕಟಿಸುತ್ತಾ ಶವ್ವಾಲ್ ತಿಂಗಳ ಒಂದರಂದು ನಾವು ಈದುಲ್‍ಫಿತ್‍ರ್ ಕೊಂಡಾಡುತ್ತೇವೆ.
ಪೆರ್ನಾಲ್ ಬಹಳ ಅನುಗ್ರಹೀತವಾದ ಒಂದು ದಿವಸವಾಗಿದೆ. ಜಗಪರಿಪಾಲಕನಾದ ಅಲ್ಲಾಹನು ತನ್ನ ದಾಸರಿಗೆ ನೀಡುವ ಸತ್ಕಾರ ದಿವಸವೂ ಹೌದು. ಆ ದಿನದಂದು ಸತ್ಯವಿಶ್ವಾಸಿಗಳೆಲ್ಲರೂ ಅಲ್ಲಾಹನ ಅತಿಥಿಗಳಾಗಿದ್ದಾರೆ. ಆದ್ದರಿಂದಲೇ ಆ ದಿನ ವ್ರತವನ್ನಾಚರಿಸುವುದು ನಿಷಿದ್ಧ. ಆ ದಿನ ಮನಬಂದಂತೆ ತಿನ್ನಲೂ, ಕುಡಿಯಲೂ ಅಲ್ಲಾಹನು ಅನುವದಿಸಿದ್ದಾನೆ.
ಮುಸಲ್ಮಾನನ ಹಬ್ಬ ಬಹಳ ವೈಶಿಷ್ಟ್ಯಪೂರ್ಣವಾದುದು. ಅದು ಬರೀ ಕುಣಿದು ಕುಪ್ಪಳಿಸುವುದಕ್ಕಷ್ಟೇ ಸೀಮಿತಗೊಳ್ಳುವ ಸಂಭ್ರಮವಲ್ಲ. ಬದಲು ಸಮಗ್ರ ಜೀವನದ ಬಗ್ಗೆ, ಸೃಷ್ಟಿಕರ್ತನ ಬಗ್ಗೆ ಚಿಂತನೆ ನಡೆಸುವ ಸಂದರ್ಭ ಕೂಡಾ ಆಗಿರುತ್ತದೆ. ಹಬ್ಬದ ದಿನದಂದು ತಾನು ಆನಂದ ಪಟ್ಟರೆ ಸಾಲದು, ಆರಾಧನೆ ಕೂಡಾ ನಡೆಸಬೇಕು. ತಾನು ಖುಷಿ ಪಟ್ಟರೆ ಸಾಲದು, ತನ್ನ ಸಮಾಜದ ಇತರರನ್ನು ಕೂಡಾ ಖುಷಿಪಡಿಸಬೇಕು. ಇದು ಈದ್‍ನ ವಿಶೇಷತೆ.
ಮುಸ್ಲಿಂ ಜನತೆಗೆ ಹಬ್ಬವನ್ನು ಅನುಗ್ರಹಿಸಿ ಕೊಟ್ಟ ಅಲ್ಲಾಹನು ಅದನ್ನು ಹೇಗೆ ಆಚರಿಸಬೇಕೆಂಬುವುದನ್ನು ಕಲಿಸಿಕೊಟ್ಟಿದ್ದಾನೆ. ಈದ್ ನಮಾಜ್, ತಕ್ಬೀರ್‍ನಂತಹ ಆರಾಧನೆಗಳು, ಸ್ನಾನ, ಹೊಸ ವಸ್ತ್ರ ಧರಿಸುವುದು, ಸುಗಂಧ ಲೇಪಿಸುವುದು, ಮೊದಲಾದ ಸೌಂದರ್ಯವೃದ್ಧಿ ಸಂಭ್ರಮಗಳು, ನೆರೆಮನೆ ಬಂಧುಮಿತ್ರಾದಿಗಳ ಸಂದರ್ಶನ, ಬಡವರಿಗೆ ಕಡ್ಡಾಯ ದಾನ, ಮತ್ತಿತರ ಕಾರ್ಯಗಳು ಇಸ್ಲಾಮಿನ ಹಬ್ಬದಲ್ಲಿ ಎದ್ದು ಕಾಣುವ ಅಂಶಗಳು. ಹಬ್ಬಕ್ಕಾಗಿ ಮಾಡುವ ಎಲ್ಲಾ ಸಂಭ್ರ್ರಮಗಳನ್ನೂ ಇಸ್ಲಾಂ ಪುಣ್ಯ ಕಾರ್ಯವೆಂದು ಪರಿಗಣಿಸುತ್ತದೆ.
ನಮಾಜ್‍ಗೆ ಪುಣ್ಯವಿರುವಂತೆ ಮಿತ್ರನ ಭೇಟಿಗೂ ಪುಣ್ಯವಿದೆ. ದಾನಕ್ಕೆ ಪುಣ್ಯವಿರುವಂತೆ ಸ್ನಾನಕ್ಕೂ ಪುಣ್ಯ ನೀಡುತ್ತದೆ ಇಸ್ಲಾಂ! ಶುದ್ಧಿ ಸತ್ಯವಿಶ್ವಾಸದ ಅರ್ಧಾಂಗವೆನ್ನುವ ಮೂಲಕ ಶುಚೀಕರಣಕ್ಕೆ ಅತ್ಯಂತ ಮಹತ್ವವಿತ್ತ ಇಸ್ಲಾಂ ಈದ್ ದಿನ ಪ್ರತ್ಯೇಕ ಸ್ನಾನ ಮಾಡುವಂತೆ ಸೂಚಿಸಿದೆ. ಅಂದು ವಿಶೇಷ ಅಡುಗೆ ಮಾಡಿ ಉಣ್ಣುವುದು, ಇತರರಿಗೆ ಉಣಬಡಿಸುವುದು ಕೂಡಾ ಉತ್ತಮ ಕಾರ್ಯ. ಈ ಆಹಾರ ಮತ್ತು ಸ್ನಾನ ದೇಹಕ್ಕೆ ಸಂಬಂಧಿಸಿದ್ದು. ಹಬ್ಬದ ಸಂದರ್ಭದಲ್ಲಿ ನೀವು ನಿಮ್ಮ ದೇಹವನ್ನು ಮರೆಯದಿರಿ ಎನ್ನುವ ಸಂದೇಶ ಇದರಲ್ಲಡಗಿದೆ. ಈದ್ ನಮಾಜ್ ಮತ್ತು ತಕ್ಬೀರ್ ಸಂಭ್ರಮದಲ್ಲಿ ಸೃಷ್ಟಿಕರ್ತನನ್ನು ಮರೆಯದಿರಿ ಎಂಬ ಸಂದೇಶವನ್ನು ಸಾರುತ್ತದೆ. ಹಬ್ಬದಂದು ದಾನ ನೀಡುವುದು ಮತ್ತು ಆಪ್ತರನ್ನು ಭೇಟಿಯಾಗುವುದು ಸಮಾಜವನ್ನು ಸಂಭ್ರಮದ ನಡುವೆ ಮರೆತು ಬಿಡಬೇಡ ಎಂಬುವುದರ ಸಂಕೇತ. ಈದ್‍ನ ಸಂದೇಶ ಅದೆಷ್ಟು ಉದಾತ್ತ ನೋಡಿ!.
ಹಬ್ಬವು ವೈಯಕ್ತಿಕ ಆಚರಣೆಗೆ ಮಾತ್ರವಾಗಬಾರದು. ಅದು ಸಾರ್ವತ್ರಿಕವಾಗಬೇಕು ಎನ್ನುವುದು ಇಸ್ಲಾಮಿನ ನಿಲುವು. ಆದ್ದರಿಂದಲೇ ಹಬ್ಬದಂದು ಮುಂಜಾನೆ ಮುಸ್ಲಿಂ ಪುರುಷರೆಲ್ಲರೂ ನಮಾಜ್‍ಗಾಗಿ ಊರಿನ ಕೇಂದ್ರವಾದ ಮಸೀದಿಯಲ್ಲಿ ಒಗ್ಗೂಡಬೇಕು. ಹಬ್ಬದಂದು ಎಲ್ಲರ ಅಡುಗೆಮನೆಯಲ್ಲಿಯೂ ಒಲೆಯುರಿಯಬೇಕು. ತನ್ನ ಮನೆಮಂದಿ ತಿಂದುಂಡು ನಲಿಯುವಾಗ ಪಕ್ಕದ ಮನೆಮಂದಿ ಹಸಿವಿನಿಂದಿರಬಾರದು. ಅದಕ್ಕೆಂದೇ ಇಸ್ಲಾಂ ಝಕಾತ್ ದಾನವನ್ನು ಕಡ್ಡಾಯಗೊಳಿಸಿದೆ. ತನ್ನ ಹಾಗೂ ಮನೆಮಂದಿಯ ಒಂದು ದಿನದ ಖರ್ಚು ಕಳೆದು ಬೇರೇನಾದರೂ ಉಳಿದಿದ್ದವನನ್ನು ಈದ್‍ನಂದು ಬಡವರಿಗೆ ಧಾನ್ಯ ದಾನ ನೀಡಲೇಬೇಕು. ಹಬ್ಬದಂದು ತಾನೊಬ್ಬ ಹೊಟ್ಟೆ ತುಂಬಿಸಿದರೆ ಸಾಲದು, ಪಕ್ಕದ ಮನೆಯನ್ನೂ ಗಮನಿಸಬೇಕು ಎನ್ನುವುದು ಈದ್‍ನ ನೀತಿ!
ಈದ್‍ನಂದು ತನ್ನ ಕುಟುಂಬ ಸಂಬಂಧಿಕರನ್ನು ಸಂದರ್ಶಿಸುವುದು. ವಿಶೇಷ ಸತ್ಕಾರ್ಯವಾಗಿದೆ. ಆಧುನಿಕತೆಯ ಸುಖಲೋಲುಪತೆಯಲ್ಲಿ ಸ್ವಾರ್ಥಪರನಾಗಿ ಬಾಳುತ್ತಿರುವ ಮನುಷ್ಯನು ಕುಟುಂಬವೆಂಬ ವ್ಯವಸ್ಥೆಯನ್ನೇ ಮರೆತಿರುವಾಗ ಇಸ್ಲಾಮಿನ ಈದ್ ಅವನನ್ನು ಕುಟುಂಬದ ಕೊಂಡಿಯೊಂದಿಗೆ ಪೋಣಿಸುತ್ತದೆ. ಅಂತೆಯೇ ಇತರ ಬಂಧು ಮಿತ್ರಾದಿಗಳನ್ನು ನೆರೆಹೊರೆಯವರನ್ನು ಸಂದರ್ಶಿಸುವುದು, ಸ್ನೇಹ ತೋರುವುದು, ಶುಭಾಶಯ ವಿನಿಮಯ ಮಾಡುವುದು, ಸಂತಸ ಹಂಚುವುದು… ಒಂದು ಸಮಾಜದ ಸ್ವಾಸ್ಥ್ಯಕ್ಕೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು?
ಆಧುನಿಕ ಜಗತ್ತಿನಲ್ಲಿ ಮನುಷ್ಯ-ಮನುಷ್ಯನ ನಡುವಿನ ಸಂಬಂಧವನ್ನು ವಸ್ತು ನಿಷ್ಟವಾಗಿ ಅವಲೋಕಿಸಿದಾಗ ಈದ್‍ನ ಹಿರಿಮೆ ಮತ್ತು ಅನಿವಾರ್ಯತೆ ಅರ್ಥವಾಗುತ್ತದೆ. ನಾನು ನನ್ನದು ಎಂಬಷ್ಟಕ್ಕೇ ಸೀಮಿತವಾಗುವ ಮನುಷ್ಯ ಇತರರ ಬಗ್ಗೆ ಯೋಚಿಸುವುದು ಬಿಡಿ, ಒಂದು ಮುಗುಳ್ನಗು ಬೀರಲು ಕೂಡಾ ಮನಸ್ಸು ಮಾಡುವುದಿಲ್ಲ. ಇತರರತ್ತ ಬೀರುವ ಸ್ನೇಹದ ಮುಗುಳ್ನಗೆ ಕೂಡಾ ಒಂದು ದಾನ ಎನ್ನುತ್ತದೆ ಇಸ್ಲಾಂ. ಐಟಿ ಕ್ರಾಂತಿಯ ಮೂಲಕ ಭೂಮಿಯನ್ನು ಮನುಷ್ಯನಿಗೆ ಹತ್ತಿರಗೊಳಿಸಿದ ಆಧುನಿಕ ಜಗತ್ತು ಮನುಷ್ಯನನ್ನು ಮಾತ್ರ ಮನುಷ್ಯನಿಂದ ಮತ್ತಷ್ಟು ದೂರಗೊಳಿಸಿದೆ ಎನ್ನುವುದು ವಾಸ್ತವ. ಇದೇ ಮನುಷ್ಯ ಜಗತ್ತಿನ ಸಕಲ ಸಮಸ್ಯೆಗಳ, ಅಶಾಂತಿಗಳ ಮೂಲ. ಈದ್ ಈ ಅಂತರವನ್ನು ನಿವಾರಿಸಲು ಕರೆ ನೀಡುತ್ತದೆ. ಇಸ್ಲಾಮಿನ ಈ ಸಾಮಾಜಿಕ ಕಾಳಜಿ, ಮಾನವೀಯ ಸ್ನೇಹ ಹಬ್ಬದಂದು ಸಾಂಕೇತಿಕ ಮಾತ್ರ; ಜೀವನ ಪರ್ಯಾಂತ ಅದನ್ನು ಪಾಲಿಸಬೇಕೆಂದು ಅದು ಸೂಚಿಸುತ್ತದೆ.
ಪ್ರೀತಿ, ಸ್ನೇಹ, ಸೌಹಾರ್ದತೆ, ಮಾನವೀಯ ಸಂಬಂಧಗಳ ಸಾಕಾರ ರೂಪವಾಗಿರುವ ಈದ್ ಮನುಷ್ಯ ಜಗತ್ತಿಗೆ ಖುಷಿ ನೀಡಲಿ…
ಬರಹ:
ಮುಹಮ್ಮದ್ ತಾಜುದ್ದೀನ್ ರಹ್‍ಮಾನಿ
ಮುದರ್ರಿಸ್, ಬೆಳ್ಳಾರೆ
( ಈದ್ ಪ್ರಯುಕ್ತ ವಿಶೇಷ ಲೇಖನ )