ಸುಬ್ರಹ್ಮಣ್ಯ : ಶಿಕ್ಷಣವು ಇಂದು ಎಲ್ಲರಿಗೂ ಸಿಗುತ್ತಿದೆ. ಶಿಕ್ಷಣ ಎನ್ನುವುದು ಅಂಕ ಮತ್ತು ಉದ್ಯೋಗ ಪಡೆಯುವ ಏಕ ಉದ್ದೇಶ ಹೊಂದಿರಬಾರದು. ಜೀವನ ಪಾಠ ಅಗತ್ಯವಿದ್ದು ಅಂತಹ ಬೋಧನೆಗಳು ಮಕ್ಕಳಿಗೆ ದೊರಕಬೇಕು ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಷ ಹೇಳಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ ಮರ್ಕಂಜ ಇಲ್ಲಿಯ ಶಾಲಾ ವಿದ್ಯಾರ್ಥಿಗಳಿಗೆ ಶ್ರೀ ಮಠದಿಂದ ನೀಡಲಾದ ಉಚಿತ ಪುಸ್ತಕವನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಅದೇ ಶಿಕ್ಷಣಕ್ಕೆ ಪ್ರೋತ್ಸಾಹ ಕೊಟ್ಟಾಗ ಅದು ಅವರ ಬದುಕಿಗೆ ಉತ್ತಮ ಪರಿಣಾಮಗಳನ್ನು ತಂದುಕೊಡುತ್ತದೆ ಎಂದವರು ಹೇಳಿದರು. ವಿದ್ಯಾರ್ಥಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಹರೀಶ್ ಹಲ್ದಡ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬರಹ ಪುಸ್ತಕ ಕೊಡುಗೆ ನೀಡಿದ ಸುದರ್ಶನ ಜೋಯಿಷ ಅವರನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಸಂಸ್ಥೆಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ ಸದಸ್ಯೆ ನಮಿನ ಮಿತ್ತಡ್ಕ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷತೆ ಜಯಂತಿ ಹೈದಂಗೂರು, ಮುಖ್ಯ ಶಿಕ್ಷಕಿ ಹೇಮಾವತಿ, ಪೋಷಕ ಪ್ರತಿನಿಧಿ ನಿತ್ಯಾನಂದ ಭೀಮಗುಳಿ ಉಪಸ್ಥಿತರಿದ್ದರು.