ಸುಳ್ಯ: ನೈರುತ್ಯ ಮುಂಗಾರು ಶ್ರೀಲಂಕಾ ತಲಪಿದ ಬಳಿಕ ಇದೀಗ ಮತ್ತೆ ವಿಳಂಬವಾಗಿದೆ. ಮಧ್ಯ ಶ್ರೀಲಂಕಾ ತಲಪಿದ ನೈರುತ್ಯ ಮುಂಗಾರು ಇದೀಗ ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ವಿಳಂಬವಾಗುತ್ತಿದೆ. ಈಗಿನ ಪ್ರಕಾರ 2 ದಿನ ವಿಳಂಬವಾಗುವ ಸಾಧ್ಯತೆ ಇದೆ. ನಿರೀಕ್ಷೆ ಪ್ರಕಾರ ಜೂ.6 ರಂದು ಕೇರಳ ಪ್ರವೇಶವಾಗಬೇಕಿದ್ದ ಮುಂಗಾರು ಇದೀಗ ವಿಳಂಬವಾಗಿದೆ. ಹವಾಮಾನ ಇಲಾಖೆ ಪ್ರಕಾರ ಕೇರಳಕ್ಕೆ ಜೂನ್ 8 ರ ಸುಮಾರಿಗೆ ತಲುಪಬಹುದಾದ ಮುನ್ಸೂಚನೆ ನೀಡಿದೆ.
ನಿರೀಕ್ಷೆ ಪ್ರಕಾರ ಜೂ.6 ರಂದು ನೈರುತ್ಯ ಮುಂಗಾರು ಕೇರಳ ಪ್ರವೇಶ ಮಾಡಬೇಕಾಗಿತ್ತು. 3 ದಿನಗಳ ಹಿಂದೆಯೇ ನಿರೀಕ್ಷೆ ಪ್ರಕಾರ ಶ್ರೀಲಂಕಾ ಪ್ರವೇಶ ಮಾಡಿತ್ತು. ಆದರೆ ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಮುಂಗಾರು ಮೇಲೆ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಶ್ರೀಲಂಕಾದಿಂದ 2 ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶ ಮಾಡುತ್ತದೆ. ಆದರೆ ಇದೀಗ ಮತ್ತೆ ವಿಳಂಬವಾಗಿದೆ. ಲಕ್ಷದ್ವೀಪದಲ್ಲಿ ಸುಳಿಗಳು ಇರುವುದರಿಂದ ಮುಂಗಾರು ಮಾರುತವನ್ನು ದುರ್ಬಲಗೊಳಿಸಿದೆ ಎಂದು ಹವಾಮಾನ ವಿಶ್ಲೇಷಣೆ ತಿಳಿಸಿದೆ. ಈ ಎಲ್ಲಾ ಕಾರಣದಿಂದ ಜೂ.8 ಸುಮಾರಿಗೆ ಕೇರಳಕ್ಕೆ ಪ್ರವೇಶವಾಗಿ ನಂತರ 2-3 ದಿನಗಳಲ್ಲಿ ಕರಾವಳಿ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ.
ಪ್ರತೀ ವರ್ಷ ಜೂ.5 ರ ಹೊತ್ತಿಗೆ ಮುಂಗಾರು ಮಾರುತ ಕೇರಳ ಪ್ರವೇಶವಾಗುತ್ತಿತ್ತು. ಅಪರೂಪ ಎಂಬಂತೆ ಈ ಬಾರಿ ವಿಳಂಬವಾಗಿದೆ. 1972 ರ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ವಿಳಂಬವಾಗಿದೆ. 1972 ರಲ್ಲಿ ಜೂ.18 ಕ್ಕೆ ಮುಂಗಾರು ಕೇರಳವನ್ನು ಪ್ರವೇಶ ಮಾಡಿತ್ತು. ಅದಕ್ಕೂ ಮೊದಲು 1918 ಹಾಗೂ 1955 ರಲ್ಲಿ ಜೂ.11 ರಂದು ಮುಂಗಾರು ಪ್ರವೇಶವಾಗಿತ್ತು. ಉಳಿದೆಲ್ಲಾ ವರ್ಷ ಸಾಮಾನ್ಯವಾಗಿ ಜೂ.5 ರೊಳಗಾಗಿ ಮುಂಗಾರು ಮಾರುತ ಕೇರಳ ಪ್ರವೇಶ ಮಾಡುತ್ತಿತ್ತು.
ಈ ನಡುವೆ ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಕಾರಣದಿಂದ ರಾಜ್ಯದ ಕೆಲವು ಕಡೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಅದರ ಬೆನ್ನಿಗೇ ನೈರುತ್ಯ ಮುಂಗಾರು ಪ್ರವೇಶವಾದರೆ ರಾಜ್ಯದಲ್ಲಿ ಮಳೆಗಾಲ ಆರಂಭ.