ಸುಳ್ಯ: ಮುಂದಿನ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ನಿಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್‍ಕುಮಾರ್ ಕಟೀಲ್ ನೇತೃತ್ವದ ಬಿಜೆಪಿ ನಿಯೋಗ ಶುಕ್ರವಾರ ಸಂಜೆ ಸಿಎಂ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದರು. ಸುಳ್ಯ ಕ್ಷೇತ್ರದ ಪಕ್ಷ ಸಂಘಟನೆಯ ಬಗ್ಗೆ, ಸುಳ್ಯದ ಜನತೆ ಮತ್ತು ಕಾರ್ಯಕರ್ತರ ಭಾವನೆಯ ಬಗ್ಗೆ ಚೆನ್ನಾಗಿ ಗೊತ್ತಿದೆ. ಹಿರಿಯ ಶಾಸಕರಾದ ಎಸ್.ಅಂಗಾರ ಅವರ ನಿಷ್ಠೆಯ ಬಗ್ಗೆಯೂ ಗೊತ್ತಿದೆ. ಅವರ ಬಗ್ಗೆ ಅಪಾರ ಗೌರವ ಇದೆ, ಪ್ರಥಮ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿಯೇ ಶಾಸಕ ಅಂಗಾರರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒಲವು ಇತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಮುಂದಿನ ವಿಸ್ತರಣೆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತು ಸುಳ್ಯ ಶಾಸಕ ಅಂಗಾರ ಅವರನ್ನು ಪ್ರಥಮ ಆದ್ಯತೆಯಲ್ಲಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಸುಳ್ಯ ಕ್ಷೇತ್ರದ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಸೆ.14 ರಂದು ಸಿಎಂ ಭೇಟಿ ಮಾಡುವುದಾಗಿ ತಿಳಿಸಲಾಗಿತ್ತು. ಇದೀಗ ಒಂದು ದಿನದ ಮೊದಲೇ ಸಿಎಂ ಭೇಟಿಗೆ ಅವಕಾಶ ಸಿಕ್ಕಿದೆ. ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದಕ್ಕೆ ಸುಳ್ಯ ಬಿಜೆಪಿ ಅಸಹಕಾರ ಚಳವಳಿ ಘೋಷಿಸಿದ್ದರು. ಬಳಿಕ ಮುಖ್ಯಮಂತ್ರಿ ಭೇಟಿ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ನೀಡಿದ ಭರವಸೆ ಮೇರೆಗೆ ಅಸಹಕಾರ ಚಳವಳಿಯನ್ನು ಹಿಂಪಡೆಯಲಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಹಾಗು ಪುತ್ತೂರು ಶಾಸಕ ಸಂಜೀವ ಮಠಂದೂರು, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಮುಖಂಡರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಎನ್.ಎ.ರಾಮಚಂದ್ರ, ಸುಧಾಕರ ಕಾಮತ್, ವಿನಯಕುಮಾರ್ ಕಂದಡ್ಕ, ದಿನೇಶ್ ಮೆದು, ರಾಕೇಶ್ ರೈ ಕೆಡೆಂಜಿ ಮತ್ತಿತರರು ನಿಯೋಗದಲ್ಲಿದ್ದರು.