ಮೇ.7 : ವಿವೇಕಾನಂದ ಮಲ್ಟಿಮೀಡಿಯಾ ಸ್ಟುಡಿಯೋ ಲೋಕಾರ್ಪಣೆ

May 6, 2019
4:00 PM

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಗಳಿಗೆ ಇದೀಗ ಹೊಸ ಲುಕ್ ಬರಲಾರಂಭಿಸಿದೆ.

Advertisement

ಕಾರಣ,  ತಾಂತ್ರಿಕವಾಗಿ ಅತ್ಯಂತ ಬಲಿಷ್ಟವಾಗಿರುವ ನೂತನ ಮಲ್ಟಿಮೀಡಿಯಾ ಸ್ಟುಡಿಯೋ ತಲೆಎತ್ತಿ ನಿಂತುಬಿಟ್ಟಿದೆ. ಮೇ.7ರಂದು ಈ ವಿವೇಕಾನಂದ ಮಲ್ಟಿಮೀಡಿಯಾ ಸ್ಟುಡಿಯೋದ ಉದ್ಘಾಟನೆ ನಡೆಯಲಿದೆ.
ವಿವೇಕಾನಂದ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗಕ್ಕೆ ಸುಮಾರು ಹನ್ನೆರಡು ವರ್ಷಗಳ ಇತಿಹಾಸವಿದೆ. ಪದವಿ ವಿದ್ಯಾರ್ಥಿಗಳ ಉತ್ಸಾಹ, ಸಾಧಿಸುವ ಛಲ, ಗುಣಮಟ್ಟ ಮಾತ್ರವಲ್ಲದೆ ಶಿಕ್ಷಣ ಪ್ರೇಮಿಗಳ ಬೇಡಿಕೆಯನ್ನು ಗಮನಿಸಿ ಕಾಲೇಜಿನಲ್ಲಿ 2017-18ನೆಯ ಸಾಲಿನಿಂದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವನ್ನೂ ಆರಂಭಿಸಲಾಯಿತು. ಇದೀಗ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಮನಗಂಡ ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ  ಉತ್ಕೃಷ್ಠ ಮಲ್ಟಿಮೀಡಿಯಾ ಸ್ಟುಡಿಯೋವನ್ನೂ ಒದಗಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಉಡುಗೊರೆಯನ್ನು ನೀಡಿದೆ.

ಅದಾಗಲೇ ಇಲ್ಲಿನ ವಿದ್ಯಾರ್ಥಿಗಳು ಸಾಕಷ್ಟು ವೀಡಿಯೋಗಳನ್ನು ಸಿದ್ಧಪಡಿಸುವಿಕೆ ಹಾಗೂ ಲೇಖನಗಳನ್ನು ಪ್ರಕಟಿಸುವಿಕೆಯಲ್ಲಿ ತೊಡಗಿಕೊಂಡಿದ್ದು, ರಾಜ್ಯದ ಪತ್ರಿಕೋದ್ಯಮ ವಲಯವನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದಾರೆ. ಹಾಗಾಗಿಯೇ ಇಲ್ಲಿ ಪತ್ರಿಕೋದ್ಯಮ ಓದುವುದು ಅನೇಕ ವಿದ್ಯಾರ್ಥಿಗಳ ಕನಸಾಗಲಾರಂಭಿಸಿದೆ. ಪರಿಣಾಮವಾಗಿ ಪ್ರಸ್ತುತ ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಅಂತಿಮ ವರ್ಷದ ಪದವಿ ಅಧ್ಯಯನದಲ್ಲಿರುವ ವಿದ್ಯಾರ್ಥಿಗಳು ಮಾರ್ಚ್-ಎಪ್ರಿಲ್‍ನಲ್ಲೇ, ಅರ್ಥಾತ್ ಇನ್ನೂ ಅಂತಿಮ ಪರೀಕ್ಷೆ ಶುರುವಾಗುವ ಮೊದಲೇ ವಿವೇಕಾನಂದ ಕಾಲೇಜಿನಲ್ಲಿ ಎಂ.ಸಿ.ಜೆ ಸೀಟ್‍ಗಾಗಿ ಪ್ರಿಬುಕ್ಕಿಂಗ್ ಮಾಡಿ ತಮ್ಮ ಅಧ್ಯಯನವನ್ನು ಖಾತರಿಪಡಿಸಿಕೊಂಡಿದ್ದರು. ಮ್ಯಾನೇಜ್‍ಮೆಂಟ್ ಕೋಟಾದಡಿಯ ಎಲ್ಲಾ ಸೀಟುಗಳು ಪ್ರಿ ಬುಕ್ಕಿಂಗ್ ಆರಂಭಗೊಂಡು ಹದಿನೈದು ದಿನಗಳೊಳಗಾಗಿ ಭರ್ತಿಯಾಗಿರುವುದೇ ಈ ವಿಭಾಗದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿ. ಸಾಗರ, ಶಿರಸಿ, ಕಾಸರಗೋಡು, ಧಾರಾವಾಡ ಮೊದಲಾದ ಕಡೆಗಳಿಂದಲೂ ವಿದ್ಯಾರ್ಥಿಗಳು ಇಲ್ಲಿನ ವಿಭಾಗವನ್ನು ಅರಸಿಬಂದಿದ್ದಾರೆ. ಇನ್ನು ವಿಶ್ವವಿದ್ಯಾನಿಲಯದ ಕೋಟಾದಡಿಯ ಸೀಟುಗಳಷ್ಟೇ ಉಳಿದಿದ್ದು, ಅದಕ್ಕಾಗಿ ವಿದ್ಯಾರ್ಥಿಗಳು ಅಂತಿಮ ಪದವಿಯ ಫಲಿತಾಂಶ ಬರುವವರೆಗೂ ಕಾಯಬೇಕಿದೆ.

ಇಲ್ಲಿನ ಪತ್ರಿಕೋದ್ಯಮ ವಿಭಾಗ ಅನೇಕ ಹೊಸತನಗಳಿಗೆ ನಾಂದಿ ಹಾಡಿರುವುದೇ ಯಶಸ್ಸಿಗೆ ಕಾರಣವೆನಿಸಿದೆ. ಮಣಿಕರ್ಣಿಕ ಮಾತುಗಾರರ ವೇದಿಕೆಯ ಮೂಲಕ ಪತ್ರಕರ್ತರಿಗೆ ಅವಶ್ಯಕತೆಯೆನಿಸುವ ಮಾತನಾಡುವ ಕಲೆಯನ್ನು ಕಲಿಸಿಕೊಟ್ಟರೆ, ಕೃಷಿ-ಖುಷಿ ಕಾರ್ಯಕ್ರಮದ ಮೂಲಕ ನೆಲದ ಬದುಕಿನ ಸಾರ್ಥಕತೆಯ ಪಾಠವೂ ಇಲ್ಲಿ ಲಭ್ಯ. ಪತ್ರಕರ್ತ ಮೇಷ್ಟ್ರು ಎಂಬ ವಿನೂತನ ಕಲ್ಪನೆ ಪತ್ರಿಕೋದ್ಯಮ ರಂಗದ ಒಳಹೊರಗನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರೆ, ಜನ ಮನ ಕಾರ್ಯಕ್ರಮ ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವ ಕಲೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿದೆ. ಇನ್ನು ಸಂದರ್ಶನ ಕಲೆ, ಫೋಟೋಗ್ರಫಿ, ವೀಡಿಯೋಗ್ರಫಿ, ವೀಡಿಯೋ ಎಡಿಟಿಂಗ್, ಪೇಜ್ ಡಿಸೈನಿಂಗ್, ಆಂಕರಿಂಗ್ ಮೊದಲಾದ ಎಲ್ಲಾ ವಿಷಯಗಳ ಬಗೆಗೂ ಈ ವಿಭಾಗದಲ್ಲಿ ತರಬೇತಿ ನಡೆಯುತ್ತದೆ. ಡಾಕ್ಯುಮೆಂಟರಿ, ಶಾರ್ಟ್‍ಫಿಲ್ಮ್, ಅಡ್ವರ್‍ಟೈಸ್‍ಮೆಂಟ್ ಡಿಸೈನಿಂಗ್ ಕೂಡ ಇಲ್ಲಿಯ ವಿದ್ಯಾರ್ಥಿಗಳಿಗೆ ನಿರಂತರ ಕಾಯಕ. ಇದರೊಂದಿಗೆ ಪತ್ರಿಕೋದ್ಯಮಕ್ಕೆ ಅತೀ ಅನಿವಾರ್ಯವೆನಿಸಿದ ಭಾಷಾಂತರ ಈ ವಿಭಾಗದ ನಿರಂತರ ಚಟುವಟಿಕೆ. ಹಾಗಾಗಿ ಇಲ್ಲಿಗೆ ಒಬ್ಬ ವಿದ್ಯಾರ್ಥಿ ಸೇರಿಕೊಂಡರೆ ಆತನ ಭವಿಷ್ಯ ಬದಲಾಗುತ್ತದೆ ಹಾಗೂ ಉನ್ನತ ಸ್ಥಾನಕ್ಕೆ ಆತ ಏರಬಲ್ಲ ಎಂಬ ನಂಬಿಕೆ ವಿದ್ಯಾರ್ಥಿಗಳ ಹೆತ್ತವರಲ್ಲೂ ಮೂಡಲಾರಂಭಿಸಿದೆ. ಪರಿಣಾಮ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗಗಳೆರಡಕ್ಕೂ ವಿದ್ಯಾರ್ಥಿಗಳು ದಾಪುಗಾಲಿಟ್ಟು ಆಗಮಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿಯೇ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಕಾಲೇಜು ಆಡಳಿತ ಮಂಡಳಿ ಅತ್ಯುತ್ತಮ ಸ್ಟುಡಿಯೋವನ್ನು ನಿರ್ಮಿಸಿಕೊಟ್ಟು ವಿಭಾಗಕ್ಕೆ ಹೆಚ್ಚಿನ ಪ್ರೇರಣೆ ನೀಡಿದೆ. ಸರಿಸುಮಾರು ಇಪ್ಪತ್ತು ಲಕ್ಷದಷ್ಟು ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಟುಡಿಯೋ ನಿರ್ಮಾಣವಾಗಿರುವುದು ಇಲ್ಲಿನ ವಿದ್ಯಾರ್ಥಿಗಳ ಅದೃಷ್ಟವೇ ಸರಿ.
ಆಂಕರಿಂಗ್ ಹಾಗೂ ಡಿಬೇಟ್ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತಹ ವಿಶಾಲ ಟೇಬಲ್, ಎರಡು ವೃತ್ತಿಪರ ವೀಡಿಯೋ ಕ್ಯಾಮರಾಗಳು, ಎರಡು ಹ್ಯಾಂಡಿಕ್ಯಾಮ್, ಕ್ಯಾನನ್ 6ಡಿ ಯಂತಹ ಅತ್ಯುತ್ಕøಷ್ಟ ಡಿಜಿಟಲ್ ಕ್ಯಾಮರಾ, ಇನ್ನೂ ನಾಲ್ಕು ಇತರ ಎಸ್‍ಎಲ್‍ಆರ್ ಕ್ಯಾಮರಾ, ಏಕಕಾಲಕ್ಕೆ ಮೂರ್ನಾಲ್ಕು ಕ್ಯಾಮರಾದಲ್ಲಿ ಚಿತ್ರೀಕರಣ ಮಾಡಿದಾಗ ಅದನ್ನು ಸಂಪಾದಿಸಲು ಬೇಕಾದ ವೀಡಿಯೋ ಮಿಕ್ಸರ್, ಜತೆಗೆ ಆಡಿಯೋ ಮಿಕ್ಸರ್, ಅತ್ಯುತ್ತಮ ಲೈಟಿಂಗ್ ವ್ಯವಸ್ಥೆ, ಅಕೋಸ್ಟಿಕ್ ಹಾಗೂ ಸೌಂಡ್ ಫ್ರೂಪ್ ವ್ಯವಸ್ಥೆ, ಹವಾನಿಯಂತ್ರಣ ವ್ಯವಸ್ಥೆ, ಅಗತ್ಯ ಸಾಫ್ಟ್‍ವೇರ್‍ಗಳು, ಭೂಮ್ ಮೈಕ್, ಕಾಲರ್ ಮೈಕ್, ಕೆಪ್ಚೂರ್ ಕಾರ್ಡ್… ಹೀಗೆ ಸ್ಟುಡಿಯೋದೊಳಗಿನ ಪರಿಕರಗಳ ಪಟ್ಟಿ ಮುಂದುವರಿಯುತ್ತದೆ.
ಇನ್ನು, ಸ್ಟುಡಿಯೋಕ್ಕೆ ತಾಗಿಕೊಂಡೇ ಇರುವ, ಪ್ರೊಡಕ್ಷನ್ ರೂಂ, ಸಾಕಷ್ಟು ಕಂಪ್ಯೂಟರ್ ವ್ಯವಸ್ಥೆಯಿರುವ ಸಂಪಾದಕೀಯ ವಿಭಾಗ, ಹಾಗೆಯೇ ಪ್ರತ್ಯೇಕವಾದ ಸಂಪಾದಕೀಯ ಕೊಠಡಿ ಹಾಗೂ ಗ್ರೀನ್ ರೂಂ ವ್ಯವಸ್ಥೆ, ವಿದ್ಯುತ್ ಕೈಕೊಟ್ಟಾಗ ಕಾರ್ಯಮುಂದುವರಿಸುವುದಕ್ಕೆ ಜನರೇಟರ್ ವ್ಯವಸ್ಥೆ ಹೀಗೆ ಮಾದರಿ ಸ್ಟುಡಿಯೋದ ನಿರ್ಮಾಣ ವಿವೇಕಾನಂದ ಕಾಲೇಜಿನಲ್ಲಾಗಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇಲ್ಲಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮೆರೆಯುವುದಕ್ಕೆ ಸನ್ನಿವೇಶ ಸಿದ್ದಗೊಂಡಿದೆ. ಅಂದಹಾಗೆ, ಇಡಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನಲ್ಲೇ ಅಧ್ಯಯನ ವ್ಯವಸ್ಥೆಗಾಗಿ ರೂಪುಗೊಂಡ ಏಕೈಕ ಸ್ಟುಡಿಯೋ ಎಂಬ ಹೆಗ್ಗಳಿಕೆಯೂ ಈ ವಿವೇಕಾನಂದ ಮಲ್ಟಿಮೀಡಿಯಾ ಸ್ಟುಡಿಯೋಗೆ ಸಲ್ಲುತ್ತದೆ.

ಉದ್ಘಾಟನಾ ಸಮಾರಂಭ :
ವಿವೇಕಾನಂದ ಮಲ್ಟಿಮೀಡಿಯಾ ಸ್ಟುಡಿಯೋವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮೇ.7ರಂದು ಬೆಳಗ್ಗೆ 9.30ಕ್ಕೆ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಉದ್ಘಾಟಿಸಲಿದ್ದಾರೆ. ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಸಂಚಾಲಕ ಎಂ.ಟಿ.ಜಯರಾಮ ಭಟ್, ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್, ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತ್ರವಲ್ಲದೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಾಗೂ ಕಾಲೇಜು ಆಡಳಿತ ಮಂಡಳಿಯ ಹಿರಿಯರು ಉಪಸ್ಥಿತರಿರುವರು. ಅದಕ್ಕೂ ಪೂರ್ವದಲ್ಲಿ ಬೆಳಗ್ಗೆ 7.30ರಿಂದ ವೇ.ಮೂ.ಅಮೈ ಕೃಷ್ಣಪ್ರಸಾದ ಭಟ್ಟರಿಂದ ಗಣಹೋಮ ನಡೆಯಲಿದೆ.

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತುಂಗಭದ್ರಾ ಜಲಾಶಯದ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ
July 2, 2025
10:57 PM
by: The Rural Mirror ಸುದ್ದಿಜಾಲ
ಪುತ್ತೂರಿನ ಅಂಬಿಕಾ ಶಿಕ್ಷಣ ಸಂಸ್ಥೆಗಳು ಈಗ ಮತ್ತಷ್ಟು ‘ಸ್ಮಾರ್ಟ್’! | ವಿದ್ಯಾರ್ಥಿಗಳ ಮನಗೆದ್ದ ಆಧುನಿಕ ವ್ಯವಸ್ಥೆಯೊಂದಿಗಿನ ಶಿಕ್ಷಣ
July 2, 2025
2:29 PM
by: The Rural Mirror ಸುದ್ದಿಜಾಲ
ಗೇರು ಕೃಷಿ | ಮಾದರಿ ಗ್ರಾಮವಾಗಿ ಸಂಪಾಜೆ ಆಯ್ಕೆ | ವಿವಿಧ ಚಟುವಟಿಕೆ ಬಗ್ಗೆ ವಿಚಾರವಿನಿಮಯ|
July 1, 2025
11:24 PM
by: The Rural Mirror ಸುದ್ದಿಜಾಲ
“ರೈಲ್ ಒನ್” ಆ್ಯಪ್ ಲೋಕಾರ್ಪಣೆ
July 1, 2025
9:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group