ಯಾರಿಗೆ ಧೈರ್ಯ ಉಂಟು ಮಾರಾಯ್ರೆ, ‘ಈ ತುಪ್ಪದ ಭರಣಿಯನ್ನು ಒಲೆಯ ಬುಡದಲ್ಲಿ ಇಡಲು…!’

April 13, 2020
10:23 PM

ಪ್ರಸಂಗ : ಭೀಷ್ಮ ವಿಜಯ

Advertisement

ಪಾತ್ರ : ಭೀಷ್ಮ
(ಸಂದರ್ಭ : ಅಂಬೆಯು ತನ್ನನ್ನು ಸಾಲ್ವನಲ್ಲಿಗೆ ಕಳುಹಿಸಬೇಕೆಂದು ಬಿನ್ನವಿಸುತ್ತಾಳೆ)

(ಸ್ವಗತ) ಓಯ್… ಕೆಲವು ಸಲ ಹೂವಿನ ಜೇನು ಕುಡಿಯುವ ನೊಣವೂ ಅಮೇಧ್ಯದಲ್ಲಿ ಕುಳಿತುಕೊಳ್ಳುತ್ತದೆ. ಫಕ್ಕನೆ ಹೂವಿಗೆ ಹಾರಿ ಹೋಗುತ್ತದೆ. ಆದರೆ ಕೆಲವು ನೊಣಗಳು ಹಾಗಲ್ಲ. ಹೂವಿನ ಸುತ್ತಲೂ ತಿರುಗುತ್ತವೆ. ಬಿಡಾರ ಮಾಡಲು ಅಲ್ಲಿಗೇ ಬರ್ತಾವೆ! ಆದ್ದರಿಂದ ಇದು (ಇವಳು) ‘ಜೇನು ನೊಣ’ ಅಲ್ಲ. ಕಾಶಿದೇಶದ ಉತ್ತಮ ಕ್ಷತ್ರಿಯನಿಗೆ ಜ್ಯೇಷ್ಠ ಪುತ್ರಿಯಾಗಿ ಹುಟ್ಟಿದ ಇವಳ ಅಭಿರುಚಿ.. ಛೇ..

ನಾನು ಇವಳನ್ನು ವಿಚಾರಣೆ ಮಾಡಿದ್ದಲ್ಲ. ನನ್ನ ಮನೆ ದೇವರು ಮರ್ಯಾದಿ ಕಾದದ್ದು. ನನ್ನ ಮಗನಿಗೋ – ಇದ್ರೆ – ಇಂತದ್ದಾದ್ರೂ ಮದುವೆ ಮಾಡಿಯೇನು? ಯಾಕೆ? ‘ಬೇಡದೇ ಇದ್ದುದನ್ನು ನನಗೆ ಗಂಟು ಹಾಕಿದ’ ಅಂತ ಮಗ ಹೇಳಲಾರ! ಇದು ಹಾಗೋ.. ನನ್ನ ಚಿಕ್ಕತಾಯಿಯ ಮಗ.. ನೋಡಿದ್ರಾ.. ಅಂತಾದ್ದನ್ನು ತನ್ನ ತಮ್ಮನಿಗೆ ಜತೆಗೂಡಿಸಿದ ಎಂಬ ಅಪವಾದ ಬಾರದೇ? ಅದಕ್ಕೆ ಹೇಳೋದ.. ಮತ್ತೊಬ್ಬನ ಆಸ್ತಿಯ ಲೆಕ್ಕಾಚಾರ ಬರೆಯುವವನಿಗೆ ಗಣಿತ ಶಾಸ್ತ್ರ ಹೇಳಿ ಕೊಡಲು ಗೊತ್ತಿರಬೇಕು. ಸ್ವಂತ ಮನೆಯ ಲೆಕ್ಕದಲ್ಲಿ ನಾಲ್ಕು ಹೆಚ್ಚೋ, ನಾಲ್ಕು ಕಡಿಮೆಯೋ ಆದರೆ ಇವನಿಗೇ ಲಾಭ, ನಷ್ಟ. ಇನ್ನೊಬ್ಬರ ಮನೆಯಲ್ಲಿ ಹೆಚ್ಚಾದರೆ ಮಾತನಾಡುವುದಿಲ್ಲ. ಕಡಿಮೆಯಾದರೆ..

ಹಾಗೆ ನೋಡಿ, ಹಸ್ತಿನಾವತಿಯಲ್ಲಿ ರಾತ್ರಿ, ಹಗಲು ಕಣ್ಣಿಗೆ ಎಣ್ಣೆ ಹಾಕಿ ಕಾಯುತ್ತಾ ಇದ್ದೇನೆ. ನನಗೆ ಮದುವೆಯಾದ ಹೆಂಡತಿಯೋ, ನನ್ನ ಮಕ್ಕಳೋ.. ಇಲ್ಲಿಯ ‘ಧರ್ಮಾಧಿಕಾರಿ’ ನಾನು. ‘ಪ್ರಜಾಧಿಕಾರಿ’ ಅಲ್ಲ. ಯಾರಿಗೂ ಗೊತ್ತಾಗದೇ ಇದ್ದುದು ನನಗಂದು ಗೊತ್ತಾಯಿತು – ಕಾಶಿ ದೇಶದ ಸ್ವಯಂವರ ವಿಚಾರ. ಹೋದರೆ ಎಷ್ಟು..ಬಂದರೆ ಎಷ್ಟು ಎಂದು ಸುಖವಾಗಿ ಮೂರು ಹೊತ್ತು ಊಟ ಮಾಡಿ ನಿದ್ದೆ ಮಾಡುತ್ತಿದ್ದರೆ ಕಾಶಿಯಲ್ಲಿ ಒಟ್ಟುಗೂಡಿದ ಕೆಲವರು ಹಸ್ತಿನಾವತಿಗೆ ‘ಗಾಯ’ ಮಾಡುತ್ತಿದ್ರು. ಅದಕ್ಕೆ ನಾನು ಎಷ್ಟೋ ಸಲ ಹೇಳುವುದು ‘ದೇವರು ಕಾಪಾಡಿದ. ನಮ್ಮ ಊರಿನ ಸತ್ಯ ದೊಡ್ಡದು’ ಅಂತ. ನನ್ನ ತಮ್ಮನಿಗೆ ಮದುವೆ ಆದ ಮೇಲೆ ಗೊತ್ತಾಗುತ್ತಿದ್ದರೆ ‘ಯಾವ ಬಾವಿಗೆ ಹಾರೋದು ನಾನು?’ ಅದಕ್ಕೇ ಹೇಳೋದು ‘ಯಥೋ ಧರ್ಮಃ ಯಥೋ ಜಯಃ’. ಧರ್ಮವಿದ್ದಲ್ಲಿ ಜಯ ಉಂಟು.

ಆದೀತು.. ಇವಳು ಪರಮ ಸುಂದರಿ. ಇವಳನ್ನು ಒಬ್ಬಳೇ ಹೋಗು ಅಂತ ಹೇಳಿದ್ರೆ.. ಕೂಡದು. ಯಾಕೆಂದರೆ ಯಾವುದೋ ಮನೆಯಲ್ಲಿದ್ದ ಸೊತ್ತನ್ನು ಭೀಷ್ಮ ತೆಕ್ಕೊಂಡು ಬಂದುದು. ಅದು ನಾಳೆಗೆ ಯಾವನ ಮನೆಯಲ್ಲಿಯೋ ಇದ್ರೆ ಭೀಷ್ಮನಿಗೂ ಅವನಿಗೂ ಒಳಗಿಂದೊಳಗೆ ‘ಕೈಯುಂಟು’ ಅಂತ ಕೆಟ್ಟ ಹೆಸರು ನಮಗಲ್ವೋ ಮಾರಾಯ್ರೆ ಬರೋದು. ಕಾಶಿ ದೇಶದಿಂದ ಇವಳನ್ನು ಕರೆದುಕೊಂಡು ಬಂದುದನ್ನು ಸಾರ್ವಜನಿಕರು ಕಂಡಿದ್ದಾರೆ. ಇವಳನ್ನು ಒಬ್ಬಳನ್ನೇ ಕಳುಹಿಸಿದರೆ ದಾರಿಯಲ್ಲಿ ಯಾವನಾದರೂ ಒಬ್ಬ ಹೊತ್ತುಕೊಂಡು ಹೋಗುವುದು, ಇಲ್ಲಾದ್ರೆ ಅಲ್ಲಿ ತಲಪುವಾಗ ‘ಸಾಲ್ವನ ಊರು ಎಷ್ಟು ದೂರ ಉಂಟೋ ಏನೋ, ಅವನಿಗಿಂತ ಇವನೇನು ಕಡಿಮೆ’ ಎಂದು ಇವಳು ಅವನನ್ನು ಮೆಚ್ಚಿಕೊಳ್ಳುವುದು..!

ಸರಿ.. ಹಾಗಾಗಿ ಇವಳ ಜತೆ ಒಬ್ಬ ಗಂಡುಸನ್ನು ಕಳುಹಿಸಬೇಕು. ಯಾರಿಗೆ ಧೈರ್ಯ ಉಂಟು ಮಾರಾಯ್ರೆ, ‘ಈ ತುಪ್ಪದ ಭರಣಿಯನ್ನು ಒಲೆಯ ಬುಡದಲ್ಲಿ ಇಡಲು.!’ ಯಾವ ಗಂಡಸರನ್ನು ಈ ವಿಷಯದಲ್ಲಿ ನಂಬಲಾರೆ. ನಮ್ಮ ತಂದೆಗೆ ಎಂಭತ್ತು ವರುಷವಾಗಿರುವಾಗ ಚಿಕ್ಕಮ್ಮನಾಗಿರುವವಳಿಗೆ ಹದಿನೆಂಟು ವರುಷ! ಎಂಭತ್ತನೇ ವರುಷದ ನಮ್ಮ ಅಪ್ಪನಿಗೆ ಹಾಗಾಗಿದೆ ಎಂದು ಗೊತ್ತಿದ್ದ ಈ ಮಗ ಮೀಸೆ ಬಂದ ಗಂಡಸರನ್ನು ಇವಳೊಂದಿಗೆ ಕಳುಹಿಸಲು ನಂಬಿಯಾನಾ? ಹಾಗೆಂದು ಒಬ್ಬಳನ್ನೇ ಕಳುಹಿಸುವ ಹಾಗಿಲ್ಲ… ಹೋ ಹೋ.. ಒಬ್ಬರಿದ್ದಾರೆ. ಈ ಹೊತ್ತಿಗೆ ನೆನಪು ಬಂತು. ನಾನು ಅವರನ್ನು ಗುರುಗಳೇ ಅಂತ ಹೇಳೋದು. ನಮ್ಮ ತಂದೆಯವರ ಕಾಲಕ್ಕೆ ಇದ್ದಾರೆ. ಅವರ ಹೆಸರನ್ನು ಕೇಳಲಿಲ್ಲ. ನಾವು ಆಚಾರ್ಯರು ಎಂದು ಸಮಷ್ಠಿಯಿಂದ ಹೇಳೋದು. ಗುರು, ಆಚಾರ್ಯ ಒಂದೇ ಅರ್ಥ ಕೊಡದೇ ಇದ್ದರೂ ಹತ್ತಿರ ಹತ್ತಿರದ ಅರ್ಥ ಕೊಡುತ್ತದೆ. ಪರಶುರಾಮರೂ ಗುರು ಹೌದು, ಆಚಾರ್ಯರೂ ಹೌದಲ್ಲಾ..

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ

ಬದುಕು ಪುರಾಣ | ‘ಅಲ್ಲಿ ತುಂಬಾ ರಾಮಾಯಣವಿದೆ !?’
April 20, 2025
7:42 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಕಾಯಿ ದೋಸೆ ಹಿಟ್ಟಿನ ಪಡ್ಡು
April 19, 2025
8:00 AM
by: ದಿವ್ಯ ಮಹೇಶ್
ಈ ದೇಶದ ಬದಲಾವಣೆ ಎಲ್ಲಿಂದ ಆರಂಭ..?
April 18, 2025
10:32 AM
by: ಮಹೇಶ್ ಪುಚ್ಚಪ್ಪಾಡಿ
ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group