ಮಂಗಳೂರು : ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುವ ಕೌಶಲ್ಯ ಎಂಬ ಒಂದು ದಿನದ ಕಾರ್ಯಕ್ರಮವನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ, ಪದವಿ, ಐ.ಟಿ.ಐ, ಡಿಪ್ಲೊಮ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಮೃದು ಕೌಶಲ್ಯ ತರಬೇತಿ ನೀಡಿ, ಉದ್ಯೋಗಾರ್ಹತೆಯ ಮಟ್ಟವನ್ನು ಹೆಚ್ಚಿಸಿ, ಅವರೊಡನೆ ಸಮಾಲೋಚನೆಯನ್ನು ನಡೆಸಿ ಅವರಲ್ಲಿರುವ ಕೊರತೆಗಳನ್ನು ಅರಿತು, ಸೂಕ್ತ ತರಬೇತಿ ನೀಡಿ, ಮೌಲ್ಯ ಮಾಪನವನ್ನು ಮಾಡಲಾಗುತ್ತದೆ.
ಯುವ ಕೌಶಲ್ಯದ ಮೂಲಕ ಕರ್ನಾಟಕ ರಾಜ್ಯಾದಾದ್ಯಂತ 60 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ತಲುಪುವ ಧ್ಯೇಯವನ್ನು ಹೊಂದಿದ್ದು, ಭಾಗವಹಿಸಲಿಚ್ಚಿಸುವ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಉಚಿತವಾಗಿ www.kaushalkar.com ಅಂತರ್ಜಾಲ ತಾಣದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ನೋಂದಾಯಿತ ಅಭ್ಯರ್ಥಿಗಳಿಗೆ ಕಾರ್ಯಕ್ರಮದ ಮಾರ್ಗದರ್ಶನ, ಅಭ್ಯರ್ಥಿಗಳೊಂದಿಗೆ ಸಮಾಲೋಚನೆ, ಮೃದು ಕೌಶಲ್ಯ ತರಬೇತಿ, ಉದ್ಯೋಗಾಕಾಂಕ್ಷಿತ ಅಭ್ಯರ್ಥಿಗಳಿಗೆ ಮೌಲ್ಯಮಾಪನ ಹಾಗೂ ಉದ್ಯೋಗವಕಾಶಗಳ ಕಿರು ಪರಿಚಯ ಹೊಂದಿದ ಕೈಪಿಡಿಯನ್ನು ನೀಡಲಾಗುತ್ತದೆ. ಕಾರ್ಯಕ್ರಮವು ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ನಡೆಯಲಿದ್ದು, ಉಪಹಾರ ಮತ್ತು ಊಟದ ವ್ಯವಸ್ಥೆಯನ್ನೊಳಗೊಂಡಿರುತ್ತದೆ.
ತರಬೇತಿ ನಡೆಯುವ ತಾಲೂಕು ವಿವರ: ಫೆಬ್ರವರಿ 4 ರಂದು ಬಂಟ್ವಾಳ ತಾಲೂಕು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ, ಫೆಬ್ರವರಿ 5 ರಂದು ಸುಳ್ಯ ತಾಲೂಕು ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ, ಫೆಬ್ರವರಿ 7 ರಂದು ಮಂಗಳೂರು ತಾಲೂಕು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಂಗಳೂರು, ಫೆಬ್ರವರಿ 10 ರಂದು ಬೆಳ್ತಂಗಡಿ ತಾಲೂಕು ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ, ಫೆಬ್ರವರಿ 11 ರಂದು ಪುತ್ತೂರು ತಾಲೂಕು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪುತ್ತೂರು ಇಲ್ಲಿ ನಡೆಯಲಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.