ಬೆಳ್ಳಾರೆ: ಯುವ ಜನತೆ ಸಮಾಜವನ್ನು ಸರಿ ದಾರಿಗೆ ಮುನ್ನಡೆಸುವ, ಅದಕ್ಕಾಗಿ ಪ್ರಕಾಶಿಸುವ ಅಭಿಮಾನ ಸ್ತಂಭಗಳಾಗಬೇಕು ಎಂದು ಪತ್ರಕರ್ತ ದುರ್ಗಾಕುಮಾರ್ ನಾಯರ್‍ಕೆರೆ ಹೇಳಿದರು.
ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಬೆಳ್ಳಾರೆಯ ಡಾ. ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇದರ ಸಹಯೋಗದಲ್ಲಿ ನಡೆದ ಯುವ ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಯುವ ಜನತೆ ನಿಸ್ತೇಜತೆ ಮತ್ತು ನಿಶ್ಶಬ್ದತೆಯಿಂದ ಹೊರಬಂದು ಆರೋಗ್ಯಪೂರ್ಣ ಸಮಾಜಕ್ಕೆ ತಮ್ಮ ಕ್ರಿಯಾತ್ಮಕ ಕೊಡುಗೆ ನೀಡುವಂತಾಗಬೇಕು. ಅಧ್ಯಯನಶೀಲರಾಗಿ ಜಗತ್ತಿನ ವರ್ತಮಾನಗಳನ್ನು ತಿಳಿದುಕೊಳ್ಳಬೇಕು. ಯಶಸ್ಸಿಗೆ ಅಡ್ಡದಾರಿಗಳಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರೀತಿಯ ಸಮಾಜ ಕಟ್ಟಬೇಕು ಎಂದು ನಾಯರ್‍ಕೆರೆ ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್‍ಕುಮಾರ್ ನಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಸಬಲೀಕರಣ ನಮ್ಮ ರಾಜ್ಯಪಾಲರ ಕಾರ್ಯಕ್ರಮವಾಗಿದ್ದು, ಯುವ ಜನತೆ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ನಿಕಟಪೂರ್ವಾಧ್ಯಕ್ಷ ತುಕರಾಮ ಏನೆಕಲ್ ಉಪಸ್ಥಿತರಿದ್ದರು. ಪ್ರಾಂಶುಪಾಲ ರಾಘವ ಎನ್. ಸ್ವಾಗತಿಸಿ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಕುಸುಮಾಧರ ಕೆಮ್ಮೂರು ವಂದಿಸಿದರು. ಕಾರ್ಯದರ್ಶಿ ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.