ಸುಳ್ಯ: ಬಣ್ಣದ ಮಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ವತಿಯಿಂದ ‘ಬಣ್ಣದ ಮಾಲಿಂಗ ಸ್ಮೃತಿ ಪುರಸ್ಕಾರ’ವನ್ನು ರಂಗ ನಿರ್ದೇಶಕ ಜೀವನ್ ರಾಂ ಸುಳ್ಯರಿಗೆ ನೀಡಿ ಗೌರವಿಸಲಾಯಿತು.
ನೀರ್ಚಾಲಿನಲ್ಲಿ ನಡೆದ ಬಣ್ಣದ ಮಾಲಿಂಗ ಸಂಸ್ಕರಣ ಸಮಾರಂಭದಲ್ಲಿ ಈ ಪುರಸ್ಕಾರ ನೀಡಲಾಯಿತು.
ಯಕ್ಷ ರಂಗದಲ್ಲಿ 8 ದಶಕಗಳ ಕಾಲ ಮೆರೆದ ಬಣ್ಣದ ಮಾಲಿಂಗರ ಮಹಿರಾವಣ ವೇಷದ 15 ಅಡಿ ಎತ್ತರದ ಯಕ್ಷಪ್ರತಿಮೆಯನ್ನು ತನ್ನ ಮನೆಯಂಗಳದಲ್ಲಿ ಸ್ಥಾಪಿಸುವ ಮೂಲಕ ಅವರ ನೆನಪನ್ನು ಶಾಶ್ವತಗೊಳಿಸಿದ,ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದ, ಮಂಗಳೂರು ವಿ.ವಿ.ಹಾಗೂ ಮಂಜೇಶ್ವರ ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರದಲ್ಲಿ ಅಧ್ಯಯನಕ್ಕೆ ಪೂರಕವಾದ ಸುಸಜ್ಜಿತ ಯಕ್ಷಗಾನ ಮ್ಯೂಸಿಯಂಗಳನ್ನು ನಿರ್ಮಿಸಿದ ಜೀವನ್ ರಾಂ ರವರ ಯಕ್ಷ ಸೇವೆಯನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗಿದೆ.
ವೇದಿಕೆಯಲ್ಲಿ ಹಿರಿಯ ವೇಷಧಾರಿ ಡಾ.ಕೋಳ್ಯೂರು ರಾಮಚಂದ್ರ ರಾವ್, ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ಬಣ್ಣದ ಮಾಲಿಂಗ ಯಕ್ಷ ಪ್ರಶಸ್ತಿ ಪುರಸ್ಕೃತರಾದ ಬೊಮ್ಮಾರು ಐತಪ್ಪ ಗೌಡ, ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ ಟಿ,ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಎನ್.ಕೃಷ್ಣ ಭಟ್,ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಮುಳ್ಳೇರಿಯಾ,ಮಹಾಜನ ಸಂಸ್ಕೃತ ಕಾಲೇಜಿನ ಮೇನೇಜರ್ ಜಯದೇವ ಖಂಡಿಗೆ,ಸಂಘಟಕ ನಾರಾಯಣ ದೇಲಂಪಾಡಿ ಮುಂತಾದವರು ಉಪಸ್ಥಿತರಿದ್ದರು.