ಸುಳ್ಯ: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯ ದ್ವೇಷ ಸಾಧನೆಗಾಗಿ ಬಂದಿಸಲಾಗಿದೆ. ಪ್ರಜಾಪ್ರಭುತ್ವ ರೀತಿಯಲ್ಲಿ ಗೆದ್ದು ಬಂದು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಿ ವಿರೋಧ ಪಕ್ಷದ ಮುಖಂಡರನ್ನು ಬಂಧಿಸಿ ದ್ವೇಷ ಸಾಧನೆ ಮಾಡುವ ಕೇಂದ್ರ ಸರಕಾರದ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಸರಕಾರಿ ಏಜೆನ್ಸಿಗಳನ್ನು ಬಳಸಿ ನಾಯಕರನ್ನು ಬಂಧಿಸಿ ಕಾಂಗ್ರೆಸನ್ನು ನಿರ್ನಾಮ ಮಾಡಬಹುದು ಎಂಬ ಮೋದಿ ಮತ್ತು ಅಮಿತ್ ಷಾ ದುರುದ್ದೇಶ ನಡೆಯುವುದಿಲ್ಲ. ಕೇಂದ್ರ ಸರ್ಕಾರದ ತಪ್ಪನ್ನು ಮರೆ ಮಾಚಿ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗುತ್ತಿದೆ. ಆರ್ಥಿಕ ವ್ಯವಸ್ಥೆ ಸಾರ್ವಕಾಲಿಕ ಕುಸಿತ ಕಂಡಿದೆ. ನೋಟು ಅಮಾನ್ಯೀಕರಣ ಮತ್ತು ಕೇಂದ್ರದ ಅಸಮರ್ಪಕ ಆರ್ಥಿಕ ನೀತಿಯಿಂದ ಮೋಟಾರು ವಾಹನ ಉದ್ಯಮ, ರಿಯಲ್ ಎಸ್ಟೇಟ್ ವ್ಯವಹಾರ ಸೇರಿದಂತೆ ಎಲ್ಲಾ ಕ್ಷೇತ್ರಗಳೂ ನೆಲಕಚ್ಚಿದೆ. ದೇಶ 15ವರ್ಷ ಹಿಂದಕ್ಕೆ ಹೋಗಿದೆ ಎಂದರು.
ಸೆ.6 ಕ್ಕೆ ಪ್ರತಿಭಟನೆ:
ಡಿ.ಕೆ.ಶಿ ಬಂಧನವನ್ನು ಖಂಡಿಸಿ ಸೆ.6 ರಂದು ಬೆಳಗ್ಗೆ 10ರಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಎಸ್.ಗಂಗಾಧರ, ಸುಧೀರ್ ರೈ ಮೇನಾಲ, ನಂದರಾಜ ಸಂಕೇಶ, ಭವಾನಿಶಂಕರ ಕಲ್ಮಡ್ಕ, ಶ್ರೀಲತಾ ಪ್ರಸನ್ನ ಉಪಸ್ಥಿತರಿದ್ದರು.