ಮಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಶುಕ್ರವಾರವೂ ಮುಂದುವರೆದಿದ್ದು, ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜನಜೀವನ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಕಳೆದ ವರ್ಷದಂತೆ ಕರ್ನಾಟಕಕ್ಕೆ ಮತ್ತೆ ಜಲಕಂಟಕ ಎದುರಾಗುವ ಭೀತಿ ಇದೆ. ಕಾರ್ಯಾಚರಣೆಗೆ ಕೂಡಾ ಮಳೆ ಅಡ್ಡಿಯಾಗುತ್ತಿದೆ. ರೈತರು ಬೆಳೆದ ಬೆಳೆಗಳು, ಮನೆಗಳು ಕೊಚ್ಚಿಹೋಗಿವೆ. ರಸ್ತೆಗಳು ಕುಸಿದು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವು ಪ್ರದೇಶಗಳು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ. ಜಿಲ್ಲಾಡಳಿತಕ್ಕೆ ಕಾರ್ಯಾಚಾರಣೆ ನಡೆಸಲು ಮಳೆ ಅಡ್ಡಿಯಾಗಿರುವುದರಿಂದ ಸಂತ್ರಸ್ಥರ ಪರಿಸ್ಥಿತಿ ಶೋಚನೀಯವಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಹಾಸನ ,ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಗದಗ, ಧಾರವಾಡ, ಬೆಳಗಾವಿ , ರಾಯಚೂರು ಸೇರಿದಂತೆ ಸುಮಾರು 12 ಕ್ಕೂ ಹೆಚ್ಚು ಜಿಲ್ಲೆಗಳು ಮಹಾಮಳೆಗೆ ಸಿಲುಕಿವೆ. ನದಿಗಳು,ಹಳ್ಳ, ಕೊಳ್ಳಗಳು ಆಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಹಾಮಳೆಗೆ ಈವರೆಗೂ ಒಟ್ಟು 10 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಮನೆ, ಮಠ, ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.
ತುಂಗಭದ್ರ, ಕಾವೇರಿ, ಭದ್ರಾ, ನೇತ್ರಾವತಿ, ಕುಮಾರಧಾರ, ಕೃಷ್ಣ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.