ಮಂಗಳೂರು: ಜಿಲ್ಲೆಯ ಜನತೆಯ ಪಾಲಿಗೆ ನಾನು ಎಂದೂ ಸಾಮಾನ್ಯ ಕಾರ್ಯಕರ್ತ. ಪಕ್ಷದಲ್ಲಿ ನಾನೆಷ್ಟೇ ಎತ್ತರಕ್ಕೆ ಏರಿದ್ದರೂ ನಾನೊಬ್ಬ ಸ್ವಯಂ ಸೇವಕ. ಜನಪ್ರತಿನಿಧಿಯಾಗಿ ಮತದಾರರ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ರಾಜಕಾರಣ ಮಾಡಿದ್ದೇನೆ. ಇದೀಗ ಪಕ್ಷದ ರಾಜ್ಯಾಧ್ಯಕ್ಷನಾಗಿಯೂ ದ.ಕ. ಜಿಲ್ಲೆಯ ಗೌರವವನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಜಿಲ್ಲಾ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ನಗರದ ಟಿವಿ ರಮಣ ಪೈ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ನೀಡಲಾದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು. ನನಗೆ ಈಗ ದೊರಕಿರುವುದು ಜವಾಬ್ಧಾರಿ. ದ.ಕ. ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿ ಬೆಳೆದಿರುವಂತೆ ರಾಜ್ಯದೆಲ್ಲೆಡೆ ಬಿಜೆಪಿಯನ್ನು ಮತಗಟ್ಟೆಗೆ ಕೊಂಡೊಯ್ಯುವ ಜವಾಬ್ಧಾರಿಯನ್ನು ನಿರ್ವಹಿಸುತ್ತೇನೆ ಎಂದು ಹೇಳಿದ ನಳಿನ್, ಸಂಘದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿದ್ದುಕೊಂಡು, ಸಂಯಮದೊಂದಿಗೆ ಸಮಯ ಪಾಲನೆಯಲ್ಲಿ ರಾಜಿ ಇಲ್ಲದೆ ಕೆಲಸ ನಿರ್ವಹಿಸುತ್ತೇನೆ. ಜಿಲ್ಲೆಯ ಗೌರವವನ್ನು ರಾಜ್ಯಾಧ್ಯಕ್ಷಾಗಿ ಉಳಿಸುತ್ತೇನೆ ಎಂದು ಹೇಳಿದರು.ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜ್ಯದಲ್ಲಿ ಆರು ದಿನಗಳ ಪ್ರವಾಸ ಮಾಡಿ, ಒಂದು ದಿನದ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದೇನೆ.ಎಂದು ನಳಿನ್ ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಶಾಸಕ ಅಂಗಾರ, ರುಕ್ಮಯ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ನಳಿನ್ ಕುಮಾರ್‌ರವನ್ನು ಅಭಿನಂದಿಸಿ ಮಾತನಾಡಿದರು.
ವೇದಿಕೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಹಿರಿಯ ನಾಯಕರಾದ ಯೋಗೀಶ್ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೃಷ್ಣ ಜೆ. ಪಾಲೆಮಾರ್, ಪ್ರಭಾಕರ ಬಂಗೇರ, ಸುದರ್ಶನ್, ಉದಯ ಕುಮಾರ್ ಶೆಟ್ಟಿ, ಮಲ್ಲಿಕಾ ಪ್ರಸಾದ್, ಜಯರಾಂ ಶೆಟ್ಟಿ, ಕಿಶೋರ್ ರೈ, ಬೃಜೇಶ್ ಚೌಟ, ಪದ್ಮನಾಭ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.