ಪುತ್ತೂರು: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ಸಮುದಾಯ ಬಾನುಲಿ ‘ರೇಡಿಯೋ ಪಾಂಚಜನ್ಯ’ಕ್ಕೆ 90.8 ಎಫ್.ಎಂ. ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಮಂತ್ರಾಲಯದ ಡೆಪ್ಯೂಟಿ ಕಾರ್ಯದರ್ಶಿ ಸಂಜೀವ ಕುಮಾರ್ ಭೇಟಿ ನೀಡಿದರು.
ರೇಡಿಯೋದ ಸಮುದಾಯ ಕಾಳಜಿಯ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಚಿಂತನೆಯ ಕಾರ್ಯಕ್ರಮಗಳ ಪ್ರಸಾರಕ್ಕೆ ಸಂಜೀವ ಕುಮಾರ್ ತೃಪ್ತಿ ವ್ಯಕ್ತಪಡಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಮಸಾಮಯಿಕ ವಿಚಾರಗಳು ತಲುಪಲು ಸಮುದಾಯ ರೇಡಿಯೋ ಉತ್ತಮ ಉಪಾಧಿ ಎನ್ನುತ್ತಾ, “ವಿದ್ಯಾರ್ಥಿಗಳ ಜ್ಞಾನದಾಹಕ್ಕೆ ರೇಡಿಯೋ ಒಂದು ಪರಿಣಾಮಕಾರಿ ಮಾಧ್ಯಮ. ಹಾಗಾಗಿ ಶೈಕ್ಷಣಿಕ ವಿಚಾರಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕಾದ ಕಾಲಘಟ್ಟದಲ್ಲಿದ್ದೇವೆ ಎಂದರು.
ಮಂಗಳೂರು ಆಕಾಶವಾಣಿಯ ಇಂಜಿನಿಯರ್ ಅಶೋಕ್ ಕುಮಾರ್ ಪಾಂಚಜನ್ಯ ಬಾನುಲಿಯ ತಾಂತ್ರಿಕ ಮಾಹಿತಿಗಳನ್ನು ಪರಿಶೀಲಿಸಿ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಕೃಷ್ಣ ಭಟ್, ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್, ವಿಶೇಷಾಧಿಕಾರಿ ವೆಂಕಟೇಶ್, ರೇಡಿಯೋ ಪಾಂಚಜನ್ಯ ಸಮಿತಿಯ ಅಧ್ಯಕ್ಷ ಪ್ರೇಮಾನಂದ ಡಿ., ಕಾರ್ಯದರ್ಶಿ ಡಿ. ವಿಜಯಕೃಷ್ಣ ಭಟ್, ನಾರಾಯಣ ಕಾರಂತ ಪೆರಾಜೆ, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ, ಪಾಂಚಜನ್ಯದ ಪ್ರಸಾರ ಸಂಯೋಜಕಿ ತೇಜಸ್ವಿ, ತಾಂತ್ರಿಕ ಪ್ರಮುಖ್ ಪ್ರಶಾಂತ್, ಯಶಸ್ ಸಂಯೋಜಕ ಗೋವಿಂದರಾಜ್ ಶರ್ಮ, ಲಕ್ಷ್ಮೀಪ್ರಸಾದ್, ಪುನೀತ್, ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.