ಬೆಂಗಳೂರು: ರೈತರ ಹಿತರಕ್ಷಣೆಗೆ ಸರಕಾರ ಯಾವತ್ತೂ ಬದ್ಧವಾಗಿದೆ. ನೆರೆಯಿಂದ ಹಾನಿಗೀಡಾದ ರೈತರಿಗೆ ರಾಜ್ಯ ಸರಕಾರ ಸಾಕಷ್ಟು ಪರಿಹಾರವನ್ನು ನೀಡಿದೆ. ಇನ್ನಷ್ಟು ಯೋಜನೆಗಳನ್ನು ಶೀಘ್ರದಲ್ಲಿಯೇ ಘೋಷಣೆ ಮಾಡಲಾಗುವುದು. ರಾಜ್ಯದ ಎಲ್ಲಾ ರೈತರ ಹಿತ ಕಾಪಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಅವರು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ , ಬಸವರಾಜು ಹಾಗು ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಸಂದರ್ಭ ಮಾತುಕತೆ ನಡೆಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಮೈಕ್ರೋ ಪೈನಾನ್ಸ್ ಕಂಪನಿಗಳು ಗಂಜಿ ಕೇಂದ್ರಗಳಿಗೆ ಹೋಗಿ ಹಣ ವಸೂಲಿಗೆ ಮುಂದಾಗಿರುವ ಕುರಿತು ಕೋಡಿಹಳ್ಳಿ ಚಂದ್ರಶೇಖರ್ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಅವುಗಳ ವಿರುದ್ದ ಕ್ರಮಕೈಗೊಳ್ಳಲು ಮನವಿ ಮಾಡಿದರು.
ತಕ್ಷಣವೇ ರಾಯಚೂರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಮುಖ್ಯಮಂತ್ರಿ ಗಳು ಕೂಡಲೇ ಫೈನಾನ್ಸ್ ಕಂಪನಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಎಲ್ಲಾ ಜಿಲ್ಲೆಗಳಲ್ಲೂ ಈ ಬಗ್ಗೆ ಗಮನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬರ ಪರಿಹಾರ ಮೊತ್ತ ಬಿಡುಗಡೆ, ಕೃಷ್ಣಾ ನದಿ ನಿರ್ವಹಣ ಪ್ರಾಧಿಕಾರ ರಚನೆ, ನೀರಾ ಮಂಡಳಿ ಸ್ಥಾಪನೆ, ಯಶಸ್ವಿನಿ ಯೋಜನೆಜಾರಿ ಸೇರಿದಂತೆ ರೈತರ ನಿಯೋಗ ಸಲ್ಲಿಸಿದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿತು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ರೈತ ಮುಖಂಡರೂ ಭಾಗಿಯಾಗಿದ್ದರು.