ಸುಳ್ಯ: ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದರೂ ರಸಗೊಬ್ಬರ ದರವನ್ನು ದುಪ್ಪಟ್ಟು ಏರಿಸಿರುವುದು ಕೇಂದ್ರದ ಬಿಜೆಪಿ ಸರಕಾರದ ಸಾಧನೆ. ರೈತರ ಬಗ್ಗೆ ಸರಕಾರಕ್ಕೆ ನಿಜವಾದ ಕಾಳಜಿಯಿದ್ದರೆ ರಸಗೊಬ್ಬರಗಳ ದರ ಕಡಿಮೆ ಮಾಡಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಕರಾವಳಿ ಭಾಗದವರೇ ಆದ ರಸಗೊಬ್ಬರ ಸಚಿವರು ರೈತರಿಗೆ ಅತೀ ಅಗತ್ಯವಾಗಿರುವ ರಸಗೊಬ್ಬರವನ್ನು ಕಡಿಮೆ ದರದಲ್ಲಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿದೇಶಿ ಅಡಿಕೆ ಆಮದಾಗುತ್ತಿರುವ ಕಾರಣ ದೇಶದ ಅಡಿಕೆಗೆ ನಿರೀಕ್ಷಿತ ದರ ದೊರೆಯುತ್ತಾ ಇಲ್ಲ. ಅಡಕೆ ಬೆಲೆ ಕುಸಿತದಿಂದ, ಹಳದಿ ರೋಗದ ಬಾದೆಯಿಂದ ಅಡಿಕೆ ಕೃಷಿಕರು ಸಂಪೂರ್ಣ ಧೃತಿಗೆಟ್ಟಿದ್ದಾರೆ. ಆದುದರಿಂದ ಕರಾವಳಿಯ ಸಂಸದರು ಅಡಿಕೆ ಕೃಷಿಕರ ಸಮಸ್ಯೆಯ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಂತೆ ರೈತರ ಖಾತೆಗೆ ಹಣ ಸಂದಾಯ ಆಗುತ್ತಾ ಇದ್ದರೂ ಹಣ ಬರುತ್ತಾ ಇಲ್ಲ ಎಂದು ಅಪಪ್ರಚಾರ ಮಾಡುವ ಬಿಜೆಪಿಗರಿಗೆ ಮನುಷ್ಯತ್ವ ಇಲ್ಲ ಎಂದು ಅವರು ಟೀಕಿಸಿದರು.
ರೈಲ್ವೇ, ಬಿ ಎಸ್ ಎನ್ ಎಲ್, ಆಸ್ಪತ್ರೆಗಳ ಖಾಸಗೀಕರಣ ಮಾಡುವ ಹುನ್ನಾರ ನಡೆಯುತಿದೆ. ಕಾಂಗ್ರೆಸ್ ಇದನ್ನು ವಿರೋಧಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ನ.ಪಂ.ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕೇರಿ, ಶರೀಫ್ ಕಂಠಿ, ಧೀರಾ ಕ್ರಾಸ್ತಾ , ಉಪಸ್ಥಿತರಿದ್ದರು.