ಮಡಿಕೇರಿ: ಮಡಿಕೇರಿ ದಸರಾ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಮಕ್ಕಳ ದಸರಾ ನಾಳೆ (ಬುಧವಾರ) ಗಾಂಧಿ ಮೈದಾನದಲ್ಲಿ ನಡೆಯಲಿದೆ. ಮಕ್ಕಳ ದಸರಾ ಪ್ರಯುಕ್ತ ಏರ್ಪಡಿಸಲಾಗಿರುವ ವಿವಿಧ ಸ್ಪರ್ಧೆಗಳಿಗೆ ಮಕ್ಕಳು ಸ್ಥಳದಲ್ಲಿಯೇ ಹೆಸರು ನೋಂದಾಯಿಸಿ ಪಾಲ್ಗೊಳ್ಳಬಹುದಾಗಿದೆ.
ಮಕ್ಕಳ ದಸರಾವನ್ನು ನಗರ ದಸರಾ ಸಮಿತಿ ಸಹಯೋಗದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಅ.2 ರಂದು ಗಾಂಧಿ ಮೈದಾನದಲ್ಲಿ ಆಯೋಜಿಸಿದೆ. ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಕ್ಲೇಮಾಡೆಲಿಂಗ್, ಸೈನ್ಸ್ ಮಾಡೆಲ್ , ಛದ್ನವೇಶ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ಜರುಗಲಿದೆ. ಬೆಳಗ್ಗೆ 9.30 ರಿಂದಲೇ ಸ್ಪರ್ಧೆಗಳು ಪ್ರಾರಂಭವಾಗಲಿದೆ.
ಮಕ್ಕಳ ದಸರಾವನ್ನು ಜಿಲ್ಲಾಧಿಕಾರಿ ಹಾಗೂ ನಗರ ದಸರಾ ಸಮಿತಿ ಅಧ್ಯಕ್ಷರಾದ ಅನೀಸ್ ಕಣ್ಣಣಿ ಜಾಯ್ ಉದ್ಘಾಟಿಸಲಿದ್ದಾರೆ. ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ, ರೋಟರಿ ವಲಯ 6 ರ ಸಹಾಯಕ ಗವರ್ನರ್ ಪಿ. ನಾಗೇಶ್ , ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ದಸರಾವನ್ನು ಮಡಿಕೇರಿಯ ದಸರಾ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ 7 ವರ್ಷಗಳಿಂದ ಆಯೋಜಿಸುತ್ತಾ ಬಂದಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುವ ಮೂಲಕ ದಸರಾದಲ್ಲಿ ಮಕ್ಕಳೂ ಪಾಲ್ಗೊಳ್ಳುವಂತಾಗಿದೆ. ಬುಧವಾರ ಸಂಜೆ ಸಾಂಸ್ಕೃತಿಕ ಸಮಿತಿ ವತಿಯಿಂದ ಮಕ್ಕಳಿಗೆ ಆದ್ಯತೆ ನೀಡಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತವಾಗಿದೆ.