ಸುಳ್ಯ: ನಗರದಲ್ಲಿ ಕಸ ಸಂಗ್ರಹ ಕಾರ್ಯ ಕಳೆದ ಕೆಲವು ದಿನಗಳಿಂದ ನಿಂತಿದೆ. ಹೀಗಾಗಿ ಸಾರ್ವಜನಿಕರು ಕಸ ವಿಲೇವಾರಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ವಾರದ ನಿರ್ದಿಷ್ಟ ದಿನಗಳಲ್ಲಿ ನಗರದ ಬೇರೆ ಭಾಗಗಳಿಗೆ ವಾಹನ ತೆರಳಿ ಕಸ ಸಂಗ್ರಹಿಸಲಾಗುತ್ತಿತ್ತು. ಇದೀಗ ಒಂದು ವಾರದಿಂದ ನಗರದಲ್ಲಿ ಕಸ ಸಂಗ್ರಹಕ್ಕೆ ಯಾವುದೇ ವಾಹನ ಬಂದಿಲ್ಲ ಸಾರ್ವಜನಿಕರು ದೂರಿದ್ದಾರೆ.
ಸಾರ್ವಜನಿಕರು ನೀಡಿದ ಮಾಹಿತಿಯಂತೆ ನಗರದ ಕುರುಂಜಿಭಾಗ್‍ಗೆ ಐದು ದಿನಗಳಿಂದ ಕಸ ಸಂಗ್ರಹ ವಾಹನ ತೆರಳಿಲ್ಲ. ಇಲ್ಲಿ ಶೇಖರವಾಗುವ ಕಸಗಳು ಮನೆಗಳಲ್ಲಿ, ಅಂಗಡಿಗಳಲ್ಲಿ ಹಾಗೆಯೇ ಉಳಿದಿದೆ. ನಗರದ ಜಟ್ಟಿಪಳ್ಳ, ಕನಿಕರಪಳ್ಳ ಭಾಗಕ್ಕೆ ವಾರದಿಂದ ಕಸ ಸಂಗ್ರಹ ವಾಹನ ತೆರಳಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ನಾವೂರು ವಾರ್ಡ್‍ಗಳಿಗೆ ವಾರಕ್ಕೆ ಮೂರು ಬಾರಿ ಕಸ ಸಂಗ್ರಹ ವಾಹನ ತೆರಳಿ ಕಸ ಸಂಗ್ರಹ ಮಾಡುತ್ತಿದ್ದರೂ ಕಳೆದ ವಾರದಲ್ಲಿ ಒಮ್ಮೆಯೂ ತೆರಳಿಲ್ಲ. ಅದೇ ರೀತಿ ವಿವಿಧ ವಾರ್ಡ್‍ಗಳಲ್ಲಿಯೂ ಕಸ ಸಂಗ್ರಹ ಆಗದೆ ಸಮಸ್ಯೆ ತಲೆದೋರಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಸುಳ್ಯ ನಗರ ಪಂಚಾಯತ್ ಸಮೀಪದ ಕಟ್ಟಡದಲ್ಲಿ ಕಳೆದ ಹಲವಾರು ತಿಂಗಳಿನಿಂದ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಕಾರ್ಯ ನಡೆಯುತಿದೆ. ನಗರದಲ್ಲಿ ಕಸ ಸಂಗ್ರಹ ಮಾಡುವ ಕಾರ್ಮಿಕರು ನ.ಪಂ.ಕಟ್ಟಡದಲ್ಲಿ ಶೇಖರಗೊಂಡಿರುವ ಕಸವನ್ನು ಬೇರೆ ಕಡೆಗೆ ಸಾಗಿಸುವ ಕಾರ್ಯದಲ್ಲಿ ನಿರತರಾಗಿರುವುದರಿಂದ ನಗರದ ಕಸ ಸಂಗ್ರಹಕ್ಕೆ ಹಿನ್ನಡೆಯಾಗಿದೆ ಎಂಬುದು ನಗರ ಪಂಚಾಯತ್ ಅಧಿಕಾರಿಗಳು ನೀಡುವ ಸ್ಪಷ್ಟನೆ. ಆದರೆ ನಗರ ಪಂಚಾಯತ್ ಬಳಿಯ ಕಸ ಸಾಗಾಟದ ನೆಪವೊಡ್ಡಿ ವಾರ್ಡ್‍ಗಳ ಮನೆಗಳಿಂದ ಕಸ ಸಂಗ್ರಹ ಸ್ಥಗಿತ ಮಾಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರ ಪಂಚಾಯತ್ ಕಟ್ಟಡ ಸಮೀಪದಲ್ಲಿ ಸಂಗ್ರಹ ವಾಗಿರುವ ಕಡೆ ವಿಲೇವಾರಿ ಮಾಡುವ ಕಾರಣ ಕೆಲವೆಡೆ ಕಸ ಸಂಗ್ರಹಕ್ಕೆ ತೊಡಕಾಗಿದೆ. ನಾಳೆಯಿಂದ ಎಂದಿನಂತೆ ಕಸ ಸಂಗ್ರಹ ಆರಂಭಿಸಲಾಗುವುದು ಎಂದು ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ತಿಳಿಸಿದ್ದಾರೆ.
ನಗರ ಸಮೀಪದ ಕಟ್ಟಡದಲ್ಲಿರುವ ಕಸವನ್ನು ಒಮ್ಮೆ ಪೂರ್ತಿಯಾಗಿ ವಿಲೇವಾರಿ ಮಾಡುವ ಕೆಲಸ ನಡೆಯುತಿದೆ. ಇದರಿಂದ ನಗರದ ಕೆಲವು ಭಾಗಗಳಲ್ಲಿ ಕಸ ಸಂಗ್ರಹ ಕಾರ್ಯಕ್ಕೆ ಸ್ವಲ್ಪ ಹಿನ್ನಡೆ ಆಗಿದೆ. ಕಸ ಸಂಗ್ರಹ ವಾಹನಗಳು ನಾಳೆಯಿಂದ ವಾರ್ಡ್‍ಗಳಿಗೆ ಕಳುಹಿಸಲಾಗವುದು ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ತಿಳಿಸಿದ್ದಾರೆ.
Advertisement