ಪುತ್ತೂರು: ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಅಣಕು ನ್ಯಾಯಾಲಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಇದರಿಂದ ವಕೀಲ ವೃತ್ತಿಯ ಹಲವು ವಿಚಾರಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಅದೇ ರೀತಿ ಈ ರೀತಿಯ ಉತ್ಸಾಹವನ್ನು ತಮ್ಮ ಮುಂದಿನ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಜಾನ್ ಮೈಕಲ್ ಕುನ್ಹ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಫೆ.23ರಂದು ನಡೆದ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನ್ಯಾಯ ತೀರ್ಮಾನಗಳನ್ನು ಮಾಡುವಾಗ ಒಂದೇ ರೀತಿಯ ಅಭಿಪ್ರಾಯಗಳನ್ನು ನ್ಯಾಯಾಧೀಶರು ಹೊಂದಿದ್ದರೆ ಉತ್ತಮ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಉಚ್ಛನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಇ. ಎಸ್ ಇಂದ್ರೇಶ್ ಮಾತನಾಡಿ, ನಮ್ಮ ದೇಶದಲ್ಲಿ ಕಾನೂನು ಕ್ಷೇತ್ರದ ಹಲವಾರು ಪ್ರಮುಖರಿದ್ದಾರೆ. ಹಲವಾರು ಪ್ರಮುಖ ನ್ಯಾಯಾಧೀಶರು ಈ ಭಾಗದಲ್ಲಿ ಇದ್ದಾರೆ. ಅದೇ ರೀತಿ ಹಲವು ಪರಿಣಿತ ಕಾನೂನು ಅಧ್ಯಾಪಕರಿದ್ದಾರೆ. ಹಾಗೆಯೇ ಹಲವು ಪ್ರಖ್ಯಾತ ನ್ಯಾಯವಾದಿಗಳು ಇದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಇಂತಹ ವ್ಯಕ್ತಿಗಳನ್ನು ರೋಲ್ ಮಾಡೆಲ್‍ಗಳನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ. ಪಿ. ಈಶ್ವರ್ ಭಟ್ ಮಾತನಾಡಿ, ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುವಾಗ ನೈತಿಕ ಮೌಲ್ಯಗಳಿಂದ ಜೊತೆಗೂಡಿಸಿಕೊಂಡು ಹೋಗಬೇಕು. ಆಗ ಮಾತ್ರ ಒಬ್ಬ ಒಳ್ಳೆಯ ವಕೀಲರಾಗಿ ಹೊರಹೊಮ್ಮಲು ಸಾಧ್ಯ. ಹಾಗೆಯೇ ಕಲಿಯುವಿಕೆ ಎಂಬುದು ನಿರಂತರ ಪ್ರಕ್ರಿಯೆ ಆಗಿದ್ದು, ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಿಂದ ಹಲವು ವಿಚಾರಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ, ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಗೌರವವನ್ನು ಅರ್ಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಂ. ವಿ. ಶಂಕರ್ ಭಟ್, ಪಿ. ಜಿ ಜಗನ್ನೀವಾಸರಾವ್, ಮನೀಷ್ ಕೆ. ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.
ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ವಿಜಯನಾರಾಯಣ ಕೆ. ಎಂ., ಕಾಲೇಜಿನ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ ರವೀಂದ್ರ., ಕಾಲೇಜಿನ ಪ್ರಾಂಶುಪಾಲರಾದ ಅಕ್ಷತಾ ಎ. ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಸುಬ್ರಹ್ಮಣ್ಯಕುಮಾರ್ ಅಗರ್ತ ಸ್ವಾಗತಿಸಿ, ಕಾನೂನು ಉಪನ್ಯಾಸಕಿ ಶ್ರೀರಕ್ಷಾ ವಂದಿಸಿದರು. ಮೂರು ದಿನಗಳ ಕಾಲ ನಡೆದ ಈ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ದೇಶದ ಹಲವಾರು ಪ್ರತಿಷ್ಠಿತ ಕಾನೂನು ಕಾಲೇಜುಗಳ 28 ತಂಡಗಳು ಭಾಗವಹಿಸಿದ್ದವು. ಜೆ. ಎಸ್. ಎಸ್. ಕಾನೂನು ಕಾಲೇಜು, ಮೈಸೂರು ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.