ಹೈದರಾಬಾದ್: ಅಂತರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಸ್ಕೋರ್ ದಾಖಲಿಸಿದ ನಾಯಕ ವಿರಾಟ್ ಕೊಹ್ಲಿ (ಔಟಾಗದೆ 94) ಆಟದಿಂದ ಶುಕ್ರವಾರ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ಗೆದ್ದಿತು.
ಆರಂಭಿಕ ಆಟಗಾರ, ಕೆ.ಎಲ್.ರಾಹುಲ್ (62 ರನ್) ಅರ್ಧಶತಕ ಬಾರಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡವು 20 ಓವರ್‌ಗಳಲ್ಲಿ 5ಕ್ಕೆ 207 ರನ್ ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು 18.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 209 ರನ್ ಗಳಿಸಿ ಗೆದ್ದಿತು.
ಟಾಸ್ ಗೆದ್ದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಬೌಲರ್‌ಗಳಿಗೆ ವಿಂಡೀಸ್ ಬ್ಯಾಟ್ಸ್‌ಮನ್‌ಗಳು ಕಠಿಣ ಸವಾಲೊಡ್ಡಿದ್ದರು. ಎಡಗೈ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಲೆಂಡ್ಲ್ ಸಿಮನ್ಸ್ (2 ರನ್)ವಿಕೆಟ್ ಗಳಿಸಿದರು. ಆದರೆ, ಎವಿನ್ ಲೂಯಿಸ್ (40; 17ಎಸೆತ, 3ಬೌಂಡರಿ, 4 ಸಿಕ್ಸರ್) ಮತ್ತು ಬ್ರೆಂಡನ್ ಕಿಂಗ್ (31;23ಎ,3ಬೌಂ, 1ಸಿ) ಎರಡನೇ ವಿಕೆಟ್ ಜೊತೆಯಾಟದಲ್ಲಿ 51 ರನ್ ಗಳನ್ನು ಗಳಿಸಿದರು. ಆರು ಓವರ್‌ಗಳು ಮುಗಿಯುವಷ್ಟರಲ್ಲಿಯೇ ತಂಡದ ಸ್ಕೋರ್ 60ರ ಗಡಿ ದಾಟಿತ್ತು. ಆರನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿಯುವಲ್ಲಿ ವಾಷಿಂಗ್ಟನ್ ಸುಂದರ್ ಯಶಸ್ವಿಯಾದರು. ಬಳಿಕ ಕ್ರೀಸ್‌ಗೆ ಬಂದ ಹೆಟ್ಮೆಯರ್ (56; 41ಎ, 2ಬೌಂ, 4 ಸಿ) ಮೆರೆದರು. ಸ್ಪಿನ್ ಮತ್ತು ಸ್ವಿಂಗ್ ಎರಡನ್ನೂ ಲೀಲಾಜಾಲವಾಗಿ ಆಡಿದರು. ಇವರ ಬ್ಯಾಟಿಂಗ್‌ನಲ್ಲಿ ಫೀಲ್ಡರ್‌ಗಳಿಗೆ ಹೆಚ್ಚು ಕೆಲಸವೇ ಇರಲಿಲ್ಲ. ಕಿಂಗ್ ಔಟಾದ ನಂತರ ಹೆಟ್ಮೆಯರ್ ಜೊತೆಗೂಡಿದ ನಾಯಕ ಕೀರನ್ ಪೊಲಾರ್ಡ್ ಸಿಡಿಲಬ್ಬರದ ಆಟವಾಡಿದರು.
ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 5ಕ್ಕೆ 207 (ಎವಿನ್ ಲೂಯಿಸ್ 40, ಬ್ರೆಂಡನ್ ಕಿಂಗ್ 31, ಶಿಮ್ರೊನ್ ಹೆಟ್ಮೆಯರ್ 56, ಕೀರನ್ ಪೊಲಾರ್ಡ್ 37, ಜೇಸನ್ ಹೋಲ್ಡರ್ ಔಟಾಗದೆ 24, ದಿನೇಶ್ ರಾಮ್ದಿನ್ ಔಟಾಗದೆ 11 , ಯಜುವೇಂದ್ರ ಚಾಹಲ್ 36ಕ್ಕೆ2)