ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಿಜ್ಞಾನ ಸಂಘದ ಆಶ್ರಯದಲ್ಲಿ ಬೆಂಕಿ ಅಪಘಾತ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳು ಮತ್ತು ಸುರಕ್ಷತಾ ವಿಧಾನಗಳ ಕುರಿತು ಗುರುವಾರ ಕಾರ್ಯಾಗಾರ ನಡೆಯಿತು.
ಮಂಗಳೂರಿನ ಆಲ್ಫಾ ಟೆಕ್ನಿಕಲ್ ಟ್ರೈನಿಂಗ್ ಆ್ಯಂಡ್ ಡೆವಲಪ್‍ಮೆಂಟ್ ಸೆಂಟರ್‍ನ ವ್ಯವಸ್ಥಾಪಕ ಪಾಲುದಾರ ರಾಜೇಶ್ ಶೆಟ್ಟಿ ಬೆಂಕಿ ಅವಘಡಗಳು ಸಂಭವಿಸಿದಾಗ ಸ್ವಯಂ ರಕ್ಷಣೆಯ ವಿಧಾನಗಳ ಬಗ್ಗೆ ಮಾತನಾಡಿದರು. ಬೆಂಕಿಯ ಮೂಲವನ್ನು ಹೊಂದಿಕೊಂಡು ವಿವಿಧ ರೀತಿಯ ಬೆಂಕಿ ಆರಿಸುವ ವಿಧಾನಗಳ ಬಗ್ಗೆ ತಿಳಿಸಿದರು. ಬೆಂಕಿ ಅಪಘಾತಗಳನ್ನು ತಡೆಗಟ್ಟುವ ವಿಧಾನಗಳು, ಅಪಘಾತ ನಡೆದ ನಂತರ ಲಭ್ಯವಿರುವ ವ್ಯವಸ್ಥೆಯಲ್ಲಿ ಹೇಗೆ ಬೆಂಕಿಯ ಪರಿಣಾಮಗಳನ್ನು ಕನಿಷ್ಟ ಮಟ್ಟಕ್ಕೆ ತರಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು. ಬೆಂಕಿ ಆರಿಸುವ ವಿವಿಧ ರೀತಿಯ ಉಪಕರಣಗಳು ಮತ್ತು ಅವುಗಳನ್ನು ಉಪಯೋಗಿಸುವ ಬಗ್ಗೆ ಹಾಗೂ ಬೆಂಕಿ ಆರಿಸುವ ಉಪಕರಣಗಳ ತಯಾರಿ, ರಿಪೇರಿ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರಿನ ಆಲ್ಫಾ ಟೆಕ್ನಿಕಲ್ ಟ್ರೈನಿಂಗ್ ಆ್ಯಂಡ್ ಡೆವಲಪ್‍ಮೆಂಟ್ ಸೆಂಟರ್‍ನ ನಿರ್ದೇಶಕ ಕೃಷ್ಣ ಶ್ರೀನಿವಾಸ ಬಾಬು ಮತ್ತು ಅವರ ತಂಡದವರು ಬೆಂಕಿ ಅವಘಡ ಸಂಭವಿಸಿದಾಗ ಬೆಂಕಿ ಆರಿಸುವ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಅನೇಕ ವಿದ್ಯಾರ್ಥಿಗಳು ಇದರ ಸ್ವಯಂ ಅನುಭವ ಪಡೆದುಕೊಂಡರು.
ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಕಾರಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಘದ ಸಂಯೋಜಕ ಪ್ರೊ. ಶಿವಪ್ರಸಾದ್ ಸ್ವಾಗತಿಸಿ, ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರು ಮತ್ತು ಬಿಎಸ್ಸಿ, ಎಂಎಸ್ಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.