ಪುತ್ತೂರು: ಕೌಶಲ್ಯ ಎಂಬುದು ಕುಶಲತೆಗೆ ಸಂಬಂಧಪಟ್ಟಿದೆ. ಅದನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಬಳಸುವ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ನಮ್ಮಲ್ಲಿರುವ ಸಾಮರ್ಥ್ಯ ಮತ್ತು ಅದರ ಮಿತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಮ್ಮೆ ನಮಗೆ ಆ ವಿಷಯ ತಿಳಿದರೆ ಮತ್ತೆ ನಮ್ಮ ಮಿತಿಯನ್ನು ನಾವು ದಾಟುವುದಿಲ್ಲ, ಅರ್ಥಾತ್ ನಮ್ಮ ಹಿಡಿತದಲ್ಲಿ ನಾವು ಇರುತ್ತೇವೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ತಾಳ್ತಜೆ ವಸಂತಕುಮಾರ್ ಹೇಳಿದರು.
ಇವರು ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗ, ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ಉದ್ಯೋಗ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಸಿಗುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಆಗ ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬೇಕೆಂದರೆ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ದೊಡ್ಡದೊಡ್ಡ ಸವಾಲುಗಳು ಎದುರಾಗುತ್ತವೆ. ಅದನ್ನು ಧೈರ್ಯದಿಂದ ಎದುರಿಸಬೇಕೆಂಬ ಸಂಕಲ್ಪದಿಂದ ಸಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಂಗಳೂರಿನ ಜಿಐವಿಇ ಸಂಸ್ಥೆಯ ಇನ್ಬಾ ವಿಘ್ನೇಶ್ ಮಾತನಾಡಿ ಪ್ರತಿಯೊಬ್ಬರೂ ಅವರಿಗಿರುವ ಕೌಶಲ್ಯಗಳ ಬಗ್ಗೆ ಅರಿತಿರಬೇಕು. ತಾನು ಒಂದು ಕ್ಷೇತ್ರದಲ್ಲಿ ಯಾಕೆ ತೊಡಗಿಸಿಕೊಳ್ಳಬೇಕೆಂದುಕೊಂಡಿದ್ದೇನೆ ಎಂಬುದನ್ನು ಮನದಟ್ಟು ಮಾಡಿಕೊಂಡಿರಬೇಕು. ಆಗ ಮಾತ್ರ ನಾವು ಹೋಗುವ ದಾರಿಯಲ್ಲಿ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಬದಲಾವಣೆಗೆ ಹೊಂದಿಕೊಳ್ಳುವ ವ್ಯಕ್ತಿತ್ವವನ್ನು ಹೊಂದಿರಬೇಕು. ಆಗ ನಾವಂದುಕೊಂಡಿರುವುದನ್ನು ಸಾಧಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಐಕ್ಯೂಎಸಿ ಘಟಕದ ಸಂಯೋಜಕ ಶ್ರೀಧರ್ ಹೆಚ್ ಜಿ ಮಾತನಾಡಿ ಈ ಹಿಂದೆ ಕೇವಲ ಜ್ಞಾನವನ್ನು ಅಳೆಯುವುದರ ಮೂಲಕ ಮಾತ್ರ ಉದ್ಯೋಗ ದೊರಕುತ್ತಿತ್ತು. ಆದರೆ ಈಗ ಕೌಶಲ್ಯಗಳನ್ನು ಆಧಾರವಾಗಿಟ್ಟುಕೊಂಡು ಉದ್ಯೋಗಿಗಳ ಆಯ್ಕೆ ನಡೆಯುತ್ತದೆ. ಕೌಶಲ್ಯಗಳಿದ್ದರೆ ಹೆಚ್ಚು ಅವಕಾಶಗಳು ನಮ್ಮನ್ನು ಅರಸಿಬರುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ ಟಿ ಜಯರಾಮ ಭಟ್ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯಗಳು ಅಗತ್ಯ, ಅದನ್ನು ಹೆಚ್ಚಿಸಿಕೊಂರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಭವಿಷ್ಯವನ್ನು ಚೆನ್ನಾಗಿ ಇರಿಸಿಕೊಳ್ಳಬೇಕೆಂದರೆ ವರ್ತಮಾನದ ನಿರ್ಧಾರಗಳು ಮುಖ್ಯವಾಗಿರುತ್ತದೆ. ಸಹನೆ ಮತ್ತು ಆತ್ಮವಿಶ್ವಾಸದಿಂದ ಇದ್ದರೆ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧ್ಯ. ಅಲ್ಲದೆ ಉದ್ಯೋಗ ದೊರಕಿದಾಗಲೂ ಮಾನವೀಯ ಗುಣಗಳನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ. ವಿಜಯ ಸರಸ್ವತಿ ಪ್ರಸ್ತಾವಿಸಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಜಯಶ್ರೀ ಹಾಗೂ ತೇಜಶ್ರೀ ಪ್ರಾರ್ಥಿಸಿದರು. ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಮಧುರಾ ನಿರೂಪಿಸಿದರು, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಪ್ರಜ್ಞಾ ಬಾರ್ಯ ವಂದಿಸಿದರು.