ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಲಾಕ್ಡೌನ್ ಇರುವುದರಿಂದ ಅನೇಕ ಜನರಿಗೆ ಸಮಸ್ಯೆಯಾಗಿದೆ. ಕೃಷಿ ಸೇರಿದಂತೆ ಸಣ್ಣ ಉದ್ಯಮ ವಿಶೇಷವಾಗಿ ದುಡಿಮೆ ಇಲ್ಲದೆ ಕಾರ್ಮಿಕ ವಲಯ ಸಂಕಷ್ಟಕ್ಕೆ ಸಿಲುಕಿದೆ. ಈ ಎಲ್ಲಾ ವರ್ಗವನ್ನು ತಕ್ಷಣಕ್ಕೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ 1610 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಥಗಿತವಾಗಿರುವ ರಾಜ್ಯದ ಆರ್ಥಿಕತೆಗೆ ಮತ್ತೆ ಉತ್ತೇಜನ ನೀಡುವ ಮತ್ತು ಸಂಕಷ್ಟಕ್ಕೆ ಒಳಗಾಗಿರುವ ಎಲ್ಲಾ ವರ್ಗದ ಜನರಿಗೆ ಪರಿಹಾರ ನೀಡುವ ಉದ್ದೇಶದಿಂದ 1610 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ವಿಶೇಷ ಪ್ಯಾಕೇಜ್‌ನಲ್ಲಿ ರಾಜ್ಯದಲ್ಲಿರುವ ಸುಮಾರು 2,30,000 ಜನ ಕ್ಷೌರಿಕ ವರ್ಗಕ್ಕೆ ತಲಾ 5,000 ಹಣ ಆರ್ಥಿಕ ನೆರವು, 60,000 ಅಗಸರಿಗೆ ಹಾಗೂ 7.75 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ 5,000 ಹಣವನ್ನು ಬ್ಯಾಂಕ್ ಖಾತೆಗೆ ಜಮಾ, ರಾಜ್ಯದಲ್ಲಿರುವ ನೋಂದಾಯಿತ 18 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗೆ ಈಗಾಗಲೇ 2,000 ರೂ ಜಮಾ ಮಾಡಲಾಗಿದೆ ಜೊತೆ ಹೆಚ್ಚುವರಿಯಾಗಿ 3 ಸಾವಿರ ಘೋಷಿಸಿದ್ದಾರೆ.
ನೇಕಾರರ ಯೋಗಕ್ಷೇಮಕ್ಕಾಗಿ ಖಾತೆಗೆ ತಲಾ 2,000 ಜಮಾ. ನೇಕಾರಿಗೆ ಉದ್ಯಮದ ಬೆಳವಣಿಗೆಗಾಗಿ ನೇಕಾರ ಸಮ್ಮಾನ್ ಯೋಜನೆ ಮೂಲಕ 80 ಕೋಟಿ ರೂ ಬಿಡುಗಡೆ. ಕಳೆದ ವರ್ಷ ನೇಕಾರರು ಪಾವತಿಸಿದ್ದ 1 ಲಕ್ಷ ವರೆಗಿನ ಸಾಲ ವಾಪಸ್. ರಾಜ್ಯದಲ್ಲಿ ಈ ವರ್ಷ 11,675 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹೂವಿನ ಬೆಳೆ ನಾಶವಾಗಿದೆ. ಹೀಗಾಗು ಹೂ ಬೆಳೆಗಾರರಿಗೆ ಆರ್ಥಿಕ ನೆರವು ಘೋಷಣೆ. ಒಂದು ಎಕರೆಗೆ ತಲಾ 25,000 ರೂ ಪರಿಹಾರ. ಸಣ್ಣ ಮತ್ತು ಮದ್ಯಮ ಕೈಗಾರಿಗೆಗಳ 2 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಗ್ರಾಹಕರ ವಿದ್ಯುತ್ ಬಿಲ್ ಮೇಲೆ ಶೇ.1 ರಷ್ಟು ಕಡಿತ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ತರಕಾರಿ ಮತ್ತು ಹಣ್ಣು ಬೆಳೆಗಾರರಿಗೂ ನೆರವು ನೀಡುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಬೃಹತ್ ಕೈಗಾರಿಕೆಗಳ 2 ತಿಂಗಳು ವಿದ್ಯುತ್ ಪಾವತಿಯಾಗದಿದ್ದರೂ ದಂಡ ವಸೂಲಿ ಮಾಡುವುದಿಲ್ಲ ಎಂದು ಇದೇ ಸಂದರ್ಭ ಸ್ಪಷ್ಟಪಡಿಸಿದರು.