ಮಡಿಕೇರಿ : ಜಿಲ್ಲಾ ಕೇಂದ್ರ ಮಡಿಕೇರಿ ನಗರದಂಚಿನ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ದೀಪಗಳ ಹಬ್ಬ ದೀಪಾವಳಿಯ ಪ್ರಯುಕ್ತ ಅ.28ರಂದು ರಾತ್ರಿ ‘ಅಮಾವಾಸ್ಯೆ ದೀಪೋತ್ಸವ’ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ತಿಳಿಸಿದ್ದಾರೆ.
ಅ.28 ರಂದು ರಾತ್ರಿ 7 ಗಂಟೆಗೆ ಕಳಸ ಪೂಜೆ, ರಾತ್ರಿ 8 ಗಂಟೆಗೆ ಅನ್ನದಾನ, ಪ್ರಸಾದ ವಿನಿಯೋಗ ಹಾಗೂ ರಾತ್ರಿ 9 ಗಂಟೆಗೆ ತಾಯಿಯ ದರ್ಶನ ನಡೆಯಲಿದ್ದು, ರಾತ್ರಿ 9.30ಕ್ಕೆ ದೀಪೋತ್ಸವ ಪ್ರಾರಂಭವಾಗಲಿದೆ.
ದೀಪೋತ್ಸವ ದಿನದಂದು ನೈವೇದ್ಯ ಪ್ರಸಾದ, ಅನ್ನದಾನ, ದೇವಸ್ಥಾನದ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಿಚ್ಛಿಸುವವರು ಖುದ್ದಾಗಿ ದೇವಾಲಯದ ಆಡಳಿತ ಕಚೇರಿಯಲ್ಲಿ ವಿಚಾರಿಸುವಂತೆ ಮನವಿ ಮಾಡಿದ್ದಾರೆ.
ಅಂದು ಭಕ್ತಾದಿಗಳು ಗ್ರಹದೋಷ ಪರಿಹಾರಕ್ಕೋಸ್ಕರ 108 ಎಳ್ಳು ಬತ್ತಿಯನ್ನು ದೇವಸ್ಥಾನದ ಆವರಣದಲ್ಲಿ ಹಚ್ಚಿದರೆ ದೋಷ ಪರಿಹಾರವಾಗುವ ನಂಬಿಕೆ ಹಿಂದಿನಿಂದಲೂ ಇದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಳ್ಳುಬತ್ತಿಯನ್ನು ಹಚ್ಚುವ ಮೂಲಕ ದೀಪೋತ್ಸವ ನಡೆಯಲಿದೆ.
ಶ್ರೀ ರಾಜರಾಜೇಶ್ವರಿ ದೇವಿಯ ಭಕ್ತರು ಹಾಗೂ ಮೂಡಾ ಅಧ್ಯಕ್ಷರಾದ ಚುಮ್ಮಿದೇವಯ್ಯ ಮಾತನಾಡಿ, ಅಮವಾಸ್ಯೆ ದೀಪೋತ್ಸವದ ಪ್ರಯುಕ್ತ ದೇವಾಲಯದ ಆಡಳಿತ ಮಂಡಳಿಯ ಸಹಕಾರದಿಂದ ತಾಯಿಯ ಗರ್ಭಗುಡಿ ಸುಂದರವಾಗಿ ಅಲಂಕೃತಗೊಳಿಸಲಾಗಿದ್ದು, ಈ ಬಾರಿ ವಿಶೇಷವಾಗಿ ಗರ್ಭಗುಡಿಯ ಬಾಗಿಲನ್ನು ಬೆಳ್ಳಿಯ ಹೊದಿಕೆಯಿಂದ ಅಲಂಕರಿಸಲಾಗಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಗೋವಿಂದ ಸ್ವಾಮಿ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 08272 224668, 223313, 94807 30523 ನ್ನು ಸಂಪರ್ಕಿಸಬಹುದಾಗಿದೆ.