ಸಂಪಾಜೆ: ನೆಹರು ಯುವ ಕೇಂದ್ರ ಕೊಡಗು, ನೇತಾಜಿ ಗೆಳೆಯರ ಬಳಗ ಚೆಡಾವು, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಂಪಾಜೆ ಇದರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವು ನ. 24 ರಂದು ಸಂಪಾಜೆ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅನಂತೇಶ್ವರ ಎನ್.ಸಿ. ಅವರು ಕಾರ್ಯಕ್ರಮ ಉದ್ಘಾಟಿಸಿದರು. ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ಶಶಿಕುಮಾರ್ ಹೆಚ್.ಬಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಪಾಜೆ ಶಾಖೆಯ ಚೆಸ್ಕ್ ಕಿರಿಯ ಎಂಜಿನಿಯರ್ ಅನಿಲ್ ಕುಮಾರ್ ಕೆ.ಜಿ., ಸಂಪಾಜೆ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕ ಚರಣ್, ಎಪಿಎಂಸಿ ಸದಸ್ಯ ದೇವಪ್ಪ, ಸಂಪಾಜೆ ಗ್ರಾ. ಪಂ. ಸದಸ್ಯೆ ಗಿರಿಜಾ ಮೋಹನ್, ವರ್ತಕರಾದ ಇಸ್ಮಾಯಿಲ್ ಪಿ.ಕೆ., ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತ ಚರಣ್ ಬಿ.ಜೆ., ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಕೃಷ್ಣಪ್ಪ ಪಡ್ಪು ಉಪಸ್ಥಿತರಿದ್ದರು.
ಅಪರಾಹ್ನ ಸನ್ಮಾನ ಸಮಾರಂಭ ಹಾಗೂ ಸಮಾರೋಪ ಸಮಾರಂಭ ನಡೆಯಿತು. ನೇತಾಜಿ ಗೆಳೆಯರ ಬಳಗದ ಸ್ಥಾಪಕ ಅಧ್ಯಕ್ಷ ಪಿಎಲ್ ಸುರೇಶ್ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಕುಮಾರ್ ಚಿದ್ಕಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೊಯಿದೀನ್ ಕುಂಞಿ ಎಸ್., ನೇತಾಜಿ ಗೆಳೆಯರ ಬಳಗದ ಸದಸ್ಯ ಉಮೇಶ್ ನಿಡುಬೆ ಉಪಸ್ಥಿತರಿದ್ದರು.
ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ವಾಸು ಕೊಯನಾಡು ಅವರು ಬಹುಮಾನ ವಿತರಿಸಿದರು. ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತ ಸಂತೋಷ್ ಕುಮಾರ್ ಎಚ್. ಬಿ. ಉಪಸ್ಥಿತರಿದ್ದರು. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸೆಲೆಸ್ಟಿನಾ ಲೋಬೊ ಅವರನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶಾಂತಕುಮಾರಿ ಚೆಡಾವು ಅವರು ಸನ್ಮಾನಿಸಿದರು.