ಸುಳ್ಯ: ಭಾರತೀಯರು ಸಂಶೋಧನೆಗೆ ಹೆಚ್ಚು ಮಹತ್ವ ನೀಡುವುದಿಲ್ಲ. ಇದರಿಂದಾಗಿ ವಿಶ್ವ ಸಂಶೋಧನಾ ವೇದಿಕೆಯಲ್ಲಿ ದೇಶ ಬಹಳ ಹಿಂದುಳಿದಿದೆ. ಸಂಶೋಧನೆಯು ಕಲಿಕೆಗೆ ಭದ್ರ ತಳಪಾಯ ಒದಗಿಸುತ್ತದೆ. ಆದುದರಿಂದ ಜ್ಞಾನ ಗಳಿಕೆಗೆ ಸಂಶೋಧನಾತ್ಮಕ ಕಲಿಕೆಗಿಂತ ಉತ್ತಮವಾದ ಮಾರ್ಗ ಇನ್ನೊಂದಿಲ್ಲ ಎಂದು ಸಾಹಿತಿ ನಿವೃತ್ತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು. ಅವರು ನೆಹರೂ ಮೆಮೋರಿಯಲ್ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಏರ್ಪಡಿಸಿದ ಸಂಶೋಧನಾತ್ಮಕ ಕಲಿಕೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಮಂಡಿಸುತ್ತಿದ್ದರು.
ನಾವು ಮಂಡನೆ ಮಾಡುವ ಯಾವುದೇ ವಿಚಾರಕ್ಕೆ ಸಂಶೋಧನೆಯ ಆಧಾರವಿದ್ದರೆ ಮಾತ್ರ ಅದನ್ನು ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ. ಸಂಶೋಧನಾ ಆಧಾರವಿಲ್ಲದ ಕಾರಣ ರಾಜಕಾರಣಿಗಳ ಬಹುತೇಕ ಹೇಳಿಕೆಗಳು ಅಪಹಾಸ್ಯಕ್ಕೆ ತುತ್ತಾಗುತ್ತವೆ. ಪ್ರೌಢ ಶಿಕ್ಷಣ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸಂಶೋಧನೆಯ ಮೂಲ ಪಾಠಗಳನ್ನು ಹೇಳಿಕೊಟ್ಟು ಅವರನ್ನು ಕಲಿಕಾ ಕುತೂಹಲಿಗಳನ್ನಾಗಿ ಮಾಡಿದರೆ ಮುಂದಿನದು ಜ್ಞಾನವಂತರ ಪೀಳಿಗೆಯಾಗುತ್ತದೆ ಎಂದು ಅವರು ಹೇಳಿದರು.
ವಾಣಿಜ್ಯ ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಪ್ರೊ.ರಮ್ಯಾ ಎಸ್.ಕೆ ಮರ್ಕಂಜ ಸಭಾಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಅರ್ಪಿತಾ ಸ್ವಾಗತಿಸಿ, ಉಪನ್ಯಾಸಕಿ ಆಶಾ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ನಾಯಕ ಕಾರ್ತಿಕ್ ಕೃಷ್ಣ ವಂದಿಸಿದರು.