ಚೆಂಬು : ನಿಸರ್ಗ ರಮಣೀಯ ಸ್ಥಳ ಇದು. ಐದು ಹಳ್ಳಿಗಳನ್ನು ಹೊಂದಿದ್ದು ಮುಖ್ಯನಗರಕ್ಕೆ ಕೇವಲ ಹನ್ನೆರಡು ಕಿಲೋಮೀಟರ್ ವ್ಯಾಪ್ತಿಯಲ್ಲಿರುವಂತಹ ಈ ಕುಗ್ರಾಮ ‘ಚೆಂಬು’. ಇಂದು ಇಲ್ಲಿಯ ಪ್ರೌಢ ಶಾಲೆಯ ಕಾರಣದಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.
ಕಿನುಮಣಿ ದೇವರ ಸಾನಿಧ್ಯದಲ್ಲಿ ಗುಡ್ಡದ ತಪ್ಪಲಿನಲ್ಲಿ ಸ್ಥಾಪನೆ ಯಾಗಿರುವ ಈ ಶಾಲೆ ಕಳೆದ ಇಪ್ಪತ್ತು ವರ್ಷಗಳಿಂದ ವಿದ್ಯಾರ್ಜನೆ ಮಾಡುತ್ತಿದ್ದು ಊರು ಬೈಲ್,ಬಾಲಂಬಿ, ಕುದುರೆಪಾಯ, ಕಾಂತಬೈಲು , ದಬ್ಬಡ್ಕದಿಂದ ಬರುವ ವಿದ್ಯಾರ್ಥಿಗಳು ಇಲ್ಲಿ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಕೂಲಿಕಾರ್ಮಿಕರು, ಮಧ್ಯಮವರ್ಗದವರ ಮಕ್ಕಳೇ ಇರುವ ಈ ಶಾಲೆ ಕಳೆದ ಐದು ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ.ನೂರರಷ್ಟು ಫಲಿತಾಂಶ ಸಾಧನೆ ಮಾಡುವುದರ ಜೊತೆಗೆ ಇಲ್ಲಿಯ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ರಾಜ್ಯಮಟ್ಟದಲ್ಲಿ ಕೂಡಾ ಸ್ಪರ್ಧಿಸಿ ಗುರುತಿಸಿಕೊಳ್ಳುತ್ತಿದ್ದಾರೆ. ತಂದೆ ಕೂಲಿಕಾರ್ಮಿಕ,ತಾಯಿ ಬೀಡಿ ಕಟ್ಟಿ ದಿನದೂಡುತ್ತಿದ್ದರೂ,ಮಗಳು ಶೃದ್ಧಾ ಬಿ.ಆರ್ ಮಾತ್ರ ಬಡತನ ಸಾಧನೆಗೆ ಅಡ್ಡಿಯಲ್ಲವೆಂಬುದನ್ನು ಎಸ್ಸೆಸ್ಸೆಲ್ಸಿ ಯಲ್ಲಿ 596 ಅಂಕಗಳನ್ನು ಪಡೆದುಕೊಂಡು ಶಾಲೆಗೆ ಮೊದಲ ಸ್ಥಾನ ಗಳಿಸುವುದರೊಂದಿಗೆ ನಿರೂಪಿಸಿದ್ದಾಳೆ. ಜೀವಿಕ ಬಿ.ಸಿ 581 ಅಂಕಗಳನ್ನು ಪಡೆದುಕೊಂಡು ದ್ವಿತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಯಲ್ಲಿ ಭಾಗವಹಿಸಿದ 22 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡು 14 ವಿದ್ಯಾರ್ಥಿಗಳು ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ‘ಸರ್ಕಾರಿ ಶಾಲೆ’ ಎಂದರೆ ಮೂಗು ಮುರಿಯುವವರೇ, ಒಮ್ಮೆ ತಿರುಗಿ ನೋಡುವಂತೆ ಮಾಡಿದೆ.ಖಾಸಗೀ ಶಾಲೆಗಿಂತಲೂ ಉತ್ತಮ ಫಲಿತಾಂಶ ದಾಖಲಿಸಿರುವ ಈ ಶಾಲೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ದೇಜಮ್ಮ ಹೇಳುತ್ತಾರೆ, “ನಮ್ಮಲ್ಲಿ ನುರಿತ ಶಿಕ್ಷಕರಿದ್ದಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆವು.ನಾವು ಶಿಕ್ಷಕರು’ಮಕ್ಕಳ ದತ್ತು ಯೋಜನೆ’ಯನ್ನು ಅಳವಡಿಸಿಕೊಂಡು ಗುಂಪುಗಳಾಗಿ ವಿಂಗಡಿಸಿ ತರಬೇತಿಯನ್ನು ನೀಡುತ್ತಿದ್ದೆವು.ಆಯಾಯ ಮಕ್ಕಳ ಗುಂಪಿನ ಶಿಕ್ಷಕರು ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ನಿರಂತರ ಮಕ್ಕಳ ಪೋಷಕರೊಡನೆ ಸಂಪರ್ಕದಲ್ಲಿದ್ದರು.ನಮ್ಮ ಎಸ್ ಡಿ ಎಂ ಸಿ ಅಧ್ಯಕ್ಷರ ಸಹಕಾರ ಬಹಳವಿದೆ.ಶಾಲಾ ಆಡಳಿತ ಮಂಡಳಿಯ ಕೆಲ ಸದಸ್ಯರು ಮತ್ತು ಶಿಕ್ಷಣ ತಜ್ಞರು ದೂರದಿಂದ ಬರುವ ಮಕ್ಕಳಿಗೆ ಅವರವರ ಮನೆಗಳಲ್ಲಿ ವಸತಿಯನ್ನು ಕಲ್ಪಿಸಿದ್ದರು.ಎಲ್ಲರ ಸಹಕಾರದಿಂದ ಉತ್ತಮ ಫಲಿತಾಂಶ ಬಂದಿರುವುದು ಸಂತಸ ತಂದಿದೆ ” ಎಂದು ಹೇಳುತ್ತಾರೆ.
ಇದೇ ಸಂದರ್ಭ ಇಲಾಖೆಯ ಸಹಕಾರದ ಬಗ್ಗೆ ಗ್ರಾಮಸ್ಥರಿಗೆ ಬೇಸರ ಇದೆ, ಈ ಬಗ್ಗೆ ಮಾತನಾಡುವ ಶಿಕ್ಷಣ ತಜ್ಞ ಹೊಸೂರು ಗೋಪಾಲಕೃಷ್ಣ,” ಕಲಿಯುವಿಕೆಯಲ್ಲಿ ಎಂತಹ ಕೆಳಮಟ್ಟದ ವಿದ್ಯಾರ್ಥಿಗಳು ನಮ್ಮ ಶಾಲೆಗೆ ಬಂದರೂ,ತೊಡೆಯ ಮೇಲೆ ಕುಳ್ಳಿರಿಸಿ ವಿದ್ಯೆ ಹೇಳಿಕೊಡುವ ಶಿಕ್ಷಕರು ನಮ್ಮಲ್ಲಿರುವುದೇ ನಮ್ಮ ಹೆಮ್ಮೆ.ಉತ್ತಮವಾದ ಫಲಿತಾಂಶವನ್ನು ದಾಖಲಿಸುತ್ತಾ ಬಂದಿದ್ದರೂ ಇಲಾಖೆಗಳ ಸ್ಪಂದನೆ ಕಡಿಮೆ.ಈಗಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕೊಡಲು ಕಂಪ್ಯೂಟರ್ ಗಳೇ ಇಲ್ಲ. ಇಲ್ಲಿ ಶಾಲಾ ಮೈದಾನಕ್ಕೆ ಆವರಣ ಗೋಡೆಯಿಲ್ಲ.ದನಗಳು ಎಲ್ಲೆಂದರಲ್ಲಿ ನುಗ್ಗುತ್ತಿರುತ್ತವೆ.ನಾನೇ ಬಾವಿ ತೋಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ನೀರು ಶುದ್ಧಿಕರಿಸಲು ‘ಅಕ್ವಾ ಗಾರ್ಡ್’ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ.ಇಲ್ಲಿಗೆ ಬರುವ ವಿದ್ಯಾರ್ಥಿಗಳು ಹೊಳೆ ಬದಿಯ ಬಹಳ ಕಿರಿದಾದ ಅಪಾಯಕಾರಿ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ಸರಕಾರ ಇದಕ್ಕೆ ಸೂಕ್ತವಾಗಿ ಸ್ಪಂದಿಸಲಿ ಮತ್ತು ಸರ್ಕಾರದ ಕೊಡುಗೆಗಳ ಹೆಚ್ಚಿನ ನಿರೀಕ್ಷೆ ಇದೆ” ಎನ್ನುತ್ತಾರೆ.
ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷರು ಹೇಳುತ್ತಾರೆ,” ಇಲ್ಲಿ ಕಲಿಯುವಿಕೆಗೆ ಪರಿಸರವೂ ಕೂಡ ಪೂರಕವಾಗಿದೆ.ಒಳ್ಳೆಯ ಫಲಿತಾಂಶಕ್ಕಾಗಿ ಎಲ್ಲರ ಶ್ರಮವನ್ನು ಶ್ಲಾಘಿಸುತ್ತೇನೆ.ನಮ್ಮ ಶಾಲೆಗೆ ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ.ಸಂಬಂಧಪಟ್ಟವರಿಂದ ಸ್ಪಂದನೆಗಾಗಿ ಇದಿರು ನೋಡುತ್ತಿದ್ದೇವೆ ” ಎನ್ನುತ್ತಾರೆ.
ಮೂಲಭೂತ ಸೌಕರ್ಯಗಳ ಸಮಸ್ಯೆ ಯಿದ್ದರೂ ಉತ್ತಮ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಈ ಶಾಲೆಯನ್ನು ಗುರುತಿಸಿ ಸಮಸ್ಯೆ ಯನ್ನು ಬಗೆಹರಿಸುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ.
(ನಿರೂಪಣೆ – ಮೋಕ್ಷಿತಾ ಪಟೇಲ್)