ಪುತ್ತೂರು: ಇಂಜಿನಿಯರ್ ಎಂಬ ವ್ಯಕ್ತಿಯನ್ನು ಕೇವಲ ವಿಷಯವನ್ನು ಆಯ್ಕೆ ಮಾಡಿ ವ್ಯಾಸಂಗ ಮಾಡುವಾತ ಎನ್ನಲು ಸಾಧ್ಯವಿಲ್ಲ. ಬದಲಾಗಿ ಎಲ್ಲರೂ ಅವರವರ ಬದುಕನ್ನು ಉತ್ತಮ ವ್ಯಕ್ತಿತ್ವದಿಂದ ಸಮಾಜದ ಅಭಿವೃದ್ಧಿಗಾಗಿ ಪ್ರಯತ್ನ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ಶಿಲ್ಪಿ ಎನ್ನಬಹುದು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸಿ. ಕೆ. ಮಂಜುನಾಥ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ನಿಮ್ಮ ಬದುಕಿಗೆ ನೀವೇ ಶಿಲ್ಪಿ’ ಎಂಬ ವಿಷಯದ ಬಗ್ಗೆ ಗುರುವಾರ ಮಾತನಾಡಿದರು.
ಸಮಾಜದ ಏಳಿಗೆಯಲ್ಲಿ ಪತ್ರಕರ್ತನ ಪಾತ್ರ ಬಹುಮುಖ್ಯ. ಒಬ್ಬ ಉತ್ತಮ ಪತ್ರಕರ್ತನ ಲೇಖನಗಳಿಂದ ಸಮಾಜದಲ್ಲಿ ಬದಲಾವಣೆಯನ್ನು ತರಬಹುದು. ಧನಾತ್ಮಕವಾದ ಸುದ್ದಿಗಳು ಜನರಿಗೆ ತಲುಪಿದಾಗ ಸುದ್ದಿಯ ಮೌಲ್ಯವು ಹೆಚ್ಚಾಗುತ್ತದೆ. ದೇಶ ಮತ್ತು ಜನರ ಸಮಸ್ಯೆಗಳನ್ನು ಸ್ಪಂದಿಸುವುದು ಮುಖ್ಯ, ಆದುದರಿಂದ ಮುಂದಿನ ಪತ್ರಕರ್ತರು ಸದೃಢ ಸಮಾಜವನ್ನು ಕಟ್ಟಲು ಕಟಿಬದ್ಧರಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಉತ್ತಮ ಮಾತುಗಾರರಾಗಿ ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ತನುಶ್ರೀ ಆಯ್ಕೆಯಾದರು. ದ್ವಿತೀಯ ವರ್ಷದ ಪತ್ರಿಕೋದ್ಯಮ ತರಗತಿಯು ಉತ್ತಮ ಮಾತುಗಾರರ ತಂಡವಾಗಿ ಹೊರಹೊಮ್ಮಿತು. ವಿದ್ಯಾರ್ಥಿಗಳಾದ ಅನಘಾ, ರಾಮ್‍ಕಿಶನ್, ಗೌತಮ್, ಜಯಶ್ರೀ, ತನುಶ್ರೀ, ಚರಿಷ್ಮಾ, ಧನ್ಯ, ಸೌಜನ್ಯ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಉಪಸ್ಥಿತರಿದ್ದರು.
ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮದ ಕಾರ್ಯದರ್ಶಿ ತೇಜಶ್ರೀ ಪಿ.ವಿ. ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು. ವಿದ್ಯಾರ್ಥಿನಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.