ಸುಳ್ಯ: ರಾಜ್ಯದಲ್ಲಿರುವ ನಗರ ಸ್ಥಳೀಯಾಡಳಿತ ಸಂಸ್ಥೆಗಳನ್ನು ರಾಜ್ಯ ಸರಕಾರ ಸಂಪೂರ್ಣ ಕಡೆಗಣಿಸಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.
ಯಡಿಯೂರಪ್ಪ ಸರ್ಕಾರ ಇದ್ದ ಸಂದರ್ಭದಲ್ಲಿ ಪ್ರತಿ ನಗರ ಪಂಚಾಯತ್ ಗಳಿಗೆ ಅಭಿವೃದ್ಧಿಗೆ 5 ಕೋಟಿ ವಿಶೇಷ ಅನುದಾನ ನೀಡಿತ್ತು. ಆದರೆ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಸರಕಾರ ಯಾವುದೇ ಅನುದಾನ ನೀಡದೆ ಕಡೆಗಣಿಸಿದೆ. ಇದು ನಗರಗಳ ಅಭಿವೃದ್ಧಿಗೆ ತೊಡಕಾಗಿದೆ. 109 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎಂಟು ತಿಂಗಳಾದರೂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಸಲು ಸರಕಾರ ಕ್ರಮ ಕೈಗೊಂಡಿಲ್ಲ. ಇದರಿಂದ ರಾಜ್ಯ ಸರಕಾರ ಜೀವಂತವಾಗಿ ಇದೆಯೇ ಎಂಬ ಸಂಶಯ ಮೂಡುತಿದೆ. ನಗರಾಡಳಿತವನ್ನು ನಿರ್ವಹಿಸುವುದರಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.
ಮೈತ್ರಿ ಸರ್ಕಾರ ರೂಪಿಸಿದ್ದಕ್ಕೆ ಕಾಂಗ್ರೆಸ್ ಈಗ ಪಶ್ಚಾತ್ತಾಪ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ಎರಡೂ ಪಕ್ಷಗಳ ನಾಯಕರಲ್ಲಿ ಇರುವ ಅಸಮಾಧಾನದಿಂದ ರಾಜ್ಯ ಸರಕಾರ ಕೆಲವೇ ದಿನದಲ್ಲಿ ಪತನಗೊಳ್ಳಲಿದೆ ಎಂದರು. ರೋಷನ್ ಬೇಗ್ ಬಿಜೆಪಿಗೆ ಬಂದರೆ ನಾವು ಖುಷಿ ಪಡುತ್ತೇವೆ. ರೋಷನ್ ಬೇಗ್ ಪಕ್ಷಕ್ಕೆ ಬರುತ್ತಾರಾ ಎಂಬುದನ್ನು ಅವರು ನಿರ್ಧರಿಸಬೇಕು. ಅವರು ಬರುವುದಾದರೆ ಅವರ ಸೇರ್ಪಡೆ ಬಗ್ಗೆ ರಾಜ್ಯ ಬಿಜೆಪಿ ನಿರ್ಧಾರ ಕೈಗೊಳ್ಳುತ್ತದೆ ಎಂದರು.