ಸಾಧಕರ ಸಾಧನೆಯಿಂದ ಸಾರ್ಥಕ್ಯದ ಬದುಕು

September 28, 2019
12:00 PM

ಒಳ್ಳೆಯದನ್ನು ಸಾವಿರ ಸಲ ಸಾರಿ ಸಾರಿ ಹೇಳಿದರೂ ಅದು ಕಾರ್ಯರೂಪಕ್ಕೆ ಬರುವುದು ಕಡಿಮೆ. ಆದರೆ ಅಲ್ಲೊಬ್ಬ ಇಲ್ಲೊಬ್ಬ ಸಾಧಕ ಸಾಧಿಸಿ ತೋರಿಸಿದಾಗ ಅದನ್ನು ನಾವೂ ಮಾಡಬಹುದಿತ್ತು ಅನ್ನಿಸುವುದು ಹೆಚ್ಚು. ಇದು ಅದರಲ್ಲಿ ಇದರಲ್ಲಿ ಅಂತ ಅಲ್ಲ. ಸಾಮಾನ್ಯವಾಗಿ ಬದುಕಿನಲ್ಲಿ ನಡೆಯುವ, ಬರುವ ಘಟನೆಗಳು. ಪುತ್ತೂರಿನ ಸಂಟ್ಯಾರ್ ಸಮೀಪದ ಮರಿಕೆಯಲ್ಲಿರುವ ಎ.ಪಿ. ಸದಾಶಿವ ಇತ್ತೀಚೆಗೆ ದೃಶ್ಯವಾಹಿನಿಯೊಂದರಲ್ಲಿ ಸುದ್ದಿಯಾದಾಗ ಇದು ಹೌದು ಎನ್ನಿಸಿತು.

Advertisement
Advertisement

ಒಬ್ಬ ವ್ಯಕ್ತಿ ನಮಗೆ ಆದರ್ಶವಾಗುವುದು ಅವರು ಮಾಡಿ ತೋರಿಸುವ ಕಾರ್ಯಗಳಿಂದ. ಕಳೆದ ಮೂವತ್ತು ವರ್ಷಗಳಲ್ಲಿ ಹತ್ತು ಎಕರೆ ಜಾಗದಲ್ಲಿ ದಟ್ಟವಾದ ಕಾಡನ್ನು ಬೆಳೆಸಿ ಹಸಿರೊಸರಿಗೆ ತನ್ನದೇ ಕಾಣ್ಕೆಯನ್ನು ಕೊಟ್ಟ ಸಾಧಕ ಅವರು. ಇದು ಸಣ್ಣ ಸಂಗತಿಯಂತು ಅಲ್ಲವೇ ಅಲ್ಲ. ನಾವು ಒಂದು ಗಿಡವನ್ನು ನಟ್ಟು ಬೆಳೆಸಲು ಹಿಂದೆ ಮುಂದೆ ನೋಡುವವರು. ಅವರಾದರೋ ಬೋಳುಗುಡ್ಡೆಯಲ್ಲಿ ದಟ್ಟ ಕಾನನದ ಕನಸು ಕಂಡು ಅದನ್ನು ನನಸಾಗಿಸಿಕೊಂಡವರು. ಮೂವತ್ತು ವರ್ಷಗಳ ಮೊದಲು ಹಕ್ಕಿಪಿಕ್ಕಿಗಳ ಇಂಚರದ ಇನಿದನಿಗಳಿಗೆ ಅಲ್ಲಿ ಅವಕಾಶವಿರಲಿಲ್ಲ. ಈಗ ಅಲ್ಲಿ ಪಕ್ಷಿ ಸಂಕುಲದ ಅನವರತ ಅವಿರತ ಇಂಚರದ ಇಂಪು ಮನಸ್ಸುಗಳಿಗೆ ನೀಡುವ ಮಹದಾನಂದ ಅದೆಷ್ಟಿರಬಹುದೆಂಬುದು ಅಳತೆಗೆ ನಿಲುಕದ್ದು.

 

ಸದಾಶಿವರು ಸಂದರ್ಶನದಲ್ಲಿ ಹೇಳಿದ ಮಾತುಗಳು ಕೃಷಿಕರೆಲ್ಲರಿಗೆ ಅನುಸರಣೀಯ. ತೋಟಕ್ಕೆ ನೀರು ಕಡಿಮೆಯಾದಾಗ ಒಂದೆರಡು ಕೊಳವೆಬಾವಿ ಕೃಷಿಗೆ ಪೂರಕವಾಗದೆ ಹೋದಾಗ ಅವರು ತೋಟದ ಸುತ್ತ ಇದ್ದ ಬೋಳುಗುಡ್ಡದಲ್ಲಿ ಇಂಗುಗುಂಡಿ ಮಾಡಲು ಶುರುಮಾಡಿದರು. ಇಂಗುಗುಂಡಿ ಮಾಡುವಾಗ ಮಗುಚುವ ಮಣ್ಣಿನಲ್ಲಿ ಬೇರೆ ಬೇರೆ ಗಿಡಗಳನ್ನು ತಂದು ನಟ್ಟರು. ಕುರುಚಲು ಗಿಡಗಳಾಗಿ ಈಗ ಮರಗಳಾಗಿ ದಟ್ಟವಾದ ಕಾಡು ಬೆಳೆದು ಹಕ್ಕಿಗಳು, ಪ್ರಾಣಿಗಳು ಸೇರಿ ಹೊಸ ಹೊಸ ತಳಿಯ ಗಿಡಮರಗಳು ಬೆಳೆಯಲು ನೆರವಾಗುತ್ತಿವೆ. ಇದರಿಂದಾಗಿ ಇಂದು ಸಾವಿರಕ್ಕೂ ಮಿಕ್ಕಿ ಪ್ರಭೇದಗಳಿರುವ ಅನಘ್ರ್ಯ ವನ ಸಂಪತ್ತಾಗಲು ಕಾರಣವಾಗಿದೆ. ಇದು ಸದಾಶಿವರ ನಿರಂತರ ಸಾಧನೆಯಿಂದಾದ ಹಸಿರೊಸರು. ಹತ್ತು ಎಕರೆಯ ಕಾಡು ಎದ್ದು ನಿಂತ ನಂತರ ಅವರ ನೀರಿನ ಸಮಸ್ಯೆ ಮಾಯ. ಕೇವಲ ಇವರಿಗಷ್ಟೇ ಅಲ್ಲ. ಸುತ್ತ ಮುತ್ತದವರ ನೀರಿನ ಸಮಸ್ಯೆಯೂ ಕಡಿಮೆಯಾಗಲು ಈ ಕಾಡು ನೆರವಾದುದು ವಿಶೇಷ.
ನಾವಾದರೆ ನೀರು ಕಡಿಮೆಯಾದರೆ ನಮ್ಮ ಮುಂದಿರುವ ಆಯ್ಕೆ ಕೊಳವೆಬಾವಿ. ಒಂದು ಕೊಳವೆ ಬಾವಿಯ ನೀರು ಕಡಿಮೆಯಾದಾಗ ಮುಂದಿನ ಆಯ್ಕೆ ಇನ್ನೊಂದು ಕೊಳವೆಬಾವಿ. ಇದರ ನಡುವೆ ಹತ್ತಿರದ ತೋಟದವರ ಮೇಲೆ ದೂರು. ಹತ್ತಿರದ ತೋಟದವರು ಕೊಳವೆಬಾವಿ ಕೊರೆಯಿಸಿ ನಮ್ಮ ಕೊಳವೆ ಬಾವಿಗೆ ಕನ್ನ ಹೊಡೆದರೆಂಬ ಆರೋಪ. ಹೀಗೆ ದಾರಿಯೇ ಬೇರೆಡೆಗೆ ಸಾಗುತ್ತವೆ. ಸದಾಶಿವರಂತೆ ಹೊಸದೊಂದು ಲೋಕಸೃಷ್ಟಿಯ ಪರಿಕಲ್ಪನೆ ಮೂಡುವುದೇ ಇಲ್ಲ.

Advertisement

ನಮಗೆ ಸದಾಶಿವರ ಸಾಧನೆ ದಾರಿದೀಪವಾಗಬೇಕು. ಅವರ ಕಾಡಿನ ಪರಿಕಲ್ಪನೆಯನ್ನು ಅಲ್ಲಿಗೆ ಭೇಟಿಕೊಟ್ಟು ಕಲಿತುಕೊಳ್ಳುವುದರಿಂದ ನಾವು ಕೂಡ ಭೂಮಿಯಲ್ಲಿ ಒಂದಷ್ಟು ದೊಡ್ಡ ಸಂಖ್ಯೆಯಲ್ಲಿ ಹಸಿರುಣಿಸಲು ಕಾರಣೀಭೂತರಾಗಬಹುದು. ನಮ್ಮ ತೋಟದ ಸುತ್ತ ಗುಡ್ಡಗಳಿದ್ದರೆ ಅಲ್ಲಿ ಈಗಾಗಲೆ ಮರಗಳಿದ್ದರೆ ನೀವು ಪುಣ್ಯವಂತರು. ಅವುಗಳನ್ನೆಲ್ಲ ಉಳಿಸುವ ಮಹತ್ಕಾರ್ಯ ಆಗಬೇಕು. ನಾವು ಗುಡ್ಡಗಳಿದ್ದರೂ ಅಲ್ಲಿ ಏನೂ ಮಾಡಿಲ್ಲವೆಂದಾದರೆ ಬಹಳ ಜವಾಬ್ದಾರಿಯುತವಾಗಿ ಆ ಕೆಲಸವನ್ನು ಮಾಡಬೇಕು. ನಮ್ಮ ಪಾಲಿಗೆ ಗಿಡನಟ್ಟು ಬೆಳೆಸಲು ಎಷ್ಟು ಜಾಗ ಸಿಗುತ್ತದೊ ಅದರ ಉಪಯೋಗ ಪಡೆಯಬೇಕು.

 

ಕಾಡುಬೆಳೆಸುವುದು ಮರಗಳು ಬೆಳೆದಾಗ ಕಡಿದು ಮಾರಾಟಮಾಡಲು ಅಲ್ಲ. ಅದು ನಮ್ಮ ಪ್ರಕೃತಿಯ ದೊಡ್ಡ ಸಂಪತ್ತಾಗಿ ಉಳಿದು ಭೂಮಿಗೆ ಹಿತನೀಡಬೇಕು. ನೆಲದ ಪುನರುಜ್ಜೀವನ ಕಾರ್ಯಕ್ಕೆ ಮರಬೆಳೆಸುವುದು ಬಹಳ ಉತ್ತಮ ದಾರಿಯೆಂಬುದನ್ನು ನಾವು ತಿಳಿದುಕೊಂಡರೆ ಇದು ಒಂದು ಆಂದೋಲನ ರೂಪದಲ್ಲಿ ಬೆಳೆಯಬಹುದು. ನಮ್ಮ ಹಿರಿಯರು ಕಾಡುಬೆಳೆಸುವುದನ್ನು ಬಹಳ ಸುಲಭದಲ್ಲಿ ಮಾಡಿ ಮುಗಿಸುತ್ತಿದ್ದರು. ಮಾವಿನ ಮರದಡಿ ಬೆಳೆದ ಗಿಡಗಳನ್ನು ಮಳೆಗಾಲದಲ್ಲಿ ಕಿತ್ತು ಗುಡ್ಡದಲ್ಲಿ ನಡುತ್ತಿದ್ದರು. ಗುದ್ದಲಿ ಸಹಾಯದಿಂದ ಗುಡ್ಡಗಳಲ್ಲಿ ಒಂದಡಿ ಹೊಂಡವಾಗುವಷ್ಟು ನೆಲದಲ್ಲಿ ಒಂದು ಊರು ಕುತ್ತಿ ಅದರೊಳಗೆ ಭತ್ತದ ಹೊಟ್ಟುತುಂಬಿ ಅದರ ಮೇಲೆ ಒಂದು ಹಲಸಿನ ಬೀಜ ಇಟ್ಟು ತೆಳುವಾಗಿ ಮಣ್ಣು ಹಾಕುತ್ತಿದ್ದರು. ಹಲಸಿನ ಬೀಜಗಳು ಮೊಳಕೆ ಬಂದು ತನ್ನ ಬೇರನ್ನು ಒಂದಡಿ ಆಳಕ್ಕೆ ಭತ್ತದ ಹೊಟ್ಟಿನೊಳಗಿಂದ ಇಳಿಸುತ್ತಿತ್ತು. ಬೇಗನೆ ಗಿಡ ಬೆಳೆದು ಮರವಾಗಲು ಹಿರಿಯರ ಈ ಸೂತ್ರ ಬಹಳ ನೆರವಾಗುತ್ತಿತ್ತು. ಒಳ್ಳೆಯ ಅಂಶಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಕೆಲವೆಡೆ ಲೋಪಗಳಾಗಿರಬಹುದು. ಅಂತಹ ಲೋಪವನ್ನು ಸದಾಶಿವ ಅವರು ಬಹಳ ಅರ್ಥಪೂರ್ಣವಾಗಿ ಲೋಕದೆದುರು ತೆರೆದಿಟ್ಟು ಬಹಳಷ್ಟು ಕೃಷಿಕರ ಕಣ್ಣುತೆರೆಸುವಂತೆ ಮಾಡಿದ್ದಾರೆ. ಸಾಧ್ಯವಾದ ಮಟ್ಟಿಗೆ ಕೃಷಿಕರಾದ ನಾವು ಗಿಡನೆಟ್ಟು ಮರಗಳನ್ನು ಬೆಳೆಸುವ. ನಟ್ಟ ಗಿಡಗಳು ಬೆಳೆಯುವಂತೆ ಮುತುವರ್ಜಿ ವಹಿಸುವ. ನಮ್ಮ ನೆಲ, ನಮ್ಮ ಜಲ, ನಮ್ಮ ಪರಿಸರ ಹಸಿರು ಹೊದ್ದ ನಂದನವನವಾಗಲು ನಾವೆಲ್ಲ ಸದಾಶಿವ ಅವರ ಕಾರ್ಯವನ್ನೇ ಸ್ಪೂರ್ತಿಯಾಗಿ ಸ್ವೀಕರಿಸುವ.

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

ಇದನ್ನೂ ಓದಿ

ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ವಾರಣಾಸಿ ಎಂಬ ದ್ವಂದ್ವಗಳ ನಗರ
May 16, 2025
1:02 PM
by: ರಮೇಶ್‌ ದೇಲಂಪಾಡಿ
ಮನ ಗೆಲ್ಲುವ ಕೈರುಚಿ, ಸುಲಭದಲ್ಲಿ ಕೈಸೆರೆಯಾಗದೇಕೆ..?
May 16, 2025
12:48 PM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group