ಬಾಳಿಲ: ಯಾವುದೇ ಅಭಿವೃದ್ದಿ ಕಾರ್ಯಗಳು, ವಿದ್ಯುತ್ ಸಂಬಂಧಿತ ಕೆಲಸಗಳ ಅನುಷ್ಠಾನದಲ್ಲಿ ಸಾರ್ವಜನಿಕರ ಅಥವಾ ಬಳಕೆದಾರರ ಸಹಭಾಗಿತ್ವ ಇದ್ದರೆ ಕೆಲಸಗಳು ವೇಗ ಪಡೆಯಲು ಸಾಧ್ಯ ಎಂದು ಬೆಳ್ಳಾರೆ ಬಳಕೆದಾರರ ವೇದಿಕೆ ಸಂಚಾಲಕ ಜಯಪ್ರಸಾದ್ ಜೋಶಿ ಹೇಳಿದರು.
ಅವರು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಠಾರದಲ್ಲಿ ಭಾನುವಾರ ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಹಾಗೂ ಭಾರತೀಯ ಕಿಸಾನ್ ಸಂಘ ಸುಳ್ಯ, ಗುತ್ತಿಗಾರು-ನಾಲ್ಕೂರು , ಎಣ್ಮೂರು ಇವುಗಳ ಸಹಭಾಗಿತ್ವದಲ್ಲಿ ನಡೆದ 16 ನೇ ವಾರ್ಷಿಕೋತ್ಸವ ಹಾಗೂ ಬಲರಾಮ ಜಯಂತಿ ಕಾರ್ಯಕ್ರಮದಲ್ಲಿ ಮಾಡಾವು 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ಪೂರ್ಣಗೊಳಿಸುವ ಬಗೆಗಿನ ಹೋರಾಟ ಮತ್ತು ಪರಿಣಾಮಗಳು ವಿಚಾರವಾಗಿ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಮಾಡಾವು 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ಕಾಮಗಾರಿಗೆ 2007 ರಲ್ಲಿ ಶಂಕುಸ್ಥಾಪನೆಯನ್ನು ಮಂಗಳೂರಿನಲ್ಲಿ ಮಾಡಲಾಗಿತ್ತು. 13 ವರ್ಷಗಳಿಂದ ಈ ಕೆಲಸ ನಡೆಯುತ್ತಲೇ ಇತ್ತು. ಸಾರ್ವಜನಿಕರು ಈ ಕಾರ್ಯದ ಹಿಂದೆ ಬಿದ್ದಾಗ 100 ದಿನದಲ್ಲಿ ಶೇಕಡಾವಾರು ಕೆಲಸಗಳು ಪ್ರಗತಿ ಕಂಡಿದೆ. ಇಲಾಖೆಗಳಿಗೆ ಅದರದೇ ಆದ ಕೆಲವೊಂದು ನಿರ್ಧಾರ, ನೀತಿಗಳು ಇರುತ್ತವೆ. ಸಾರ್ವಜನಿಕರು ಈ ಸಂದರ್ಭ ಆಸಕ್ತಿ ತೋರಿದರೆ ಇಲಾಖೆಗಳಿಗೂ ಅನುಕೂಲವಾಗುತ್ತದೆ ಎಂದರು.
ಭ್ರಷ್ಟಾಚಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ರಾಜಕೀಯ ಕಾರಣಗಳಿಂದ ಕೆಲವೊಂದು ಕೆಲಸಗಳು ಕುಂಠಿತವಾಗುತ್ತವೆ. ಮಾಡಾವು 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ವಿಚಾರದಲ್ಲೂ ಆರಂಭದಲ್ಲಿ ಇದೇ ಆಗಿತ್ತು. ಇಲಾಖೆಗಳಿಗೆ ಅನುಮತಿ, ಉತ್ಸಾಹದ ಕೊರತೆ ಕಂಡುಬಂದಿತ್ತು. ಬಳಿಕ ಭಾರತೀಯ ಕಿಸಾನ್ ಸಂಘವು ಆಸಕ್ತಿ ತೋರಿದ ಬಳಿಕ ಸಾರ್ವಜನಿಕರೆಲ್ಲ ಸಹಕಾರದಿಂದ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲು ಸಾಧ್ಯವಾಯಿತು ಎಂದು ಜಯಪ್ರಸಾದ್ ಹೇಳಿದರು. ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇರುವ ಸಂದರ್ಭದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗುತ್ತದೆ. ಆಗ ಹೆಚ್ಚು ಕೆಲಸವಾಗುತ್ತದೆ ಎಂದರು.
ಮಾಡಾವು 110 ಕೆ.ವಿ. ವಿದ್ಯುತ್ ಸಬ್ ಸ್ಟೇಶನ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ಪ್ರಕರಣಗಳು ಬೇಗ ಮುಗಿಯುವಂತೆಯೂ ಸಾರ್ವಜನಿಕರ ಪ್ರಯತ್ನವಾಗಿದೆ.ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಗಳು ವಿದ್ಯುತ್ ಬಗ್ಗೆ ನಿರ್ಣಯ ಮಾಡಿ ಸಹಕಾರ ಮಾಡಿವೆ. ಇದೆಲ್ಲಾ ಕಾರಣಗಳಿಂದ 17 ವರ್ಷದಲ್ಲಿ ಆಗದ ಕೆಲಸವು 100 ದಿನದಲ್ಲಿ ಆಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಬಾಳಿಲ ಭಾಕಿಸಂ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕರ್ವಂಕಲ್ಲು , ಮಂಗಳೂರು ವಿಭಾಗ ಅಂಚೆ ಅಧೀಕ್ಷಕ ಶ್ರೀಹರ್ಷ , ಗುತ್ತಿಗಾರು ಭಾಕಿಸಂ ಕಾರ್ಯದರ್ಶಿ ಕುಮಾರಸ್ವಾಮಿ ಮೇಲ್ತೋಟ ಉಪಸ್ಥಿತರಿದ್ದರು.