ಸುಳ್ಯ:ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದರೂ ಸುತ್ತೋಲೆಗಳಲ್ಲಿನ ಗೊಂದಲಗಳಿಂದಾಗಿ ಅರ್ಹ ರೈತರಿಗೆ ಸಾಲ ಮನ್ನಾ ಯೋಜನೆಯ ಪ್ರಯೋಜನ ಸಿಗದೆ ಅನ್ಯಾಯ ಆಗಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಸನ್ನ ಎಣ್ಮೂರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ರೈತರು ಸಂಘಟಿತರಾಗಿ ತೀವ್ರ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ.
ತಂತ್ರಾಂಶ ಜೋಡಣೆಯ ತಾಂತ್ರಿಕ ಸಮಸ್ಯೆಗಳು ಕೂಡ ರೈತರು ಸಾಲ ಮನ್ನಾ ಸೌಲಭ್ಯ ಪಡೆಯುವುದರಿಂದ ವಂಚಿತರನ್ನಾಗಿಸಿದೆ ಎಂದರು. ಆರಂಭದಲ್ಲಿ ಡಿಬಿಡಿ ಮೂಲಕ ರೈತರ ಖಾತೆಗೆ ಸಾಲ ಮನ್ನಾ ಜಮೆ ಆಗುತ್ತದೆ ಎಂದು ರೂಪೇ ಕಾರ್ಡ್ ಸಂಖ್ಯೆ ನಮೂದಿಸಲು ಆದೇಶ ಬಂದಿತ್ತು. ಬಳಿಕ ಈ ಆದೇಶ ಸಡಿಲಿಸಿ ಡಿಬಿಡಿ ಬದಲು ನೇರವಾಗಿ ರೈತರ ಖಾತೆಗೆ ಹಣ ಜಮೆ ಆಗುತ್ತದೆ ಎಂದು ಆದೆಶ ಹೊರಡಿಸಿತ್ತು. ಇದು ತೀವ್ರ ಗೊಂದಲ ಸೃಷ್ಠಿಸಿತ್ತು. ಅಲ್ಲದೆ ಸಹಕಾರಿ ಸಂಘಗಳಿಗೆ ತುರ್ತಾಗಿ ಅಪ್‍ಲೋಡ್ ಮಾಡಿ ಮುಕ್ತಾಯಗೊಳಿಸಬೇಕಾದ ಒತ್ತಡ ಇದ್ದ ಕಾರಣ ಉಳಿತಾಯ ಖಾತೆ ಸಂಖ್ಯೆಯನ್ನು ನಂತರ ಎಡಿಟ್ ಮಾಡಿ ಅಳವಡಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆ ಸಂದರ್ಭದಲ್ಲಿ ಖಾತೆ ಸಂಖ್ಯೆಯ ಸ್ಥಳದಲ್ಕಿ ‘0’ ಎಂದು ನಮೂದಿಸಿ ಸಹಕಾರಿ ಸಂಘಗಳು ಅಪ್‍ಲೋಡ್ ಮಾಡಲಾಗಿತ್ತು. ಆದರೆ ಬಳಿಕ ಉಳಿತಾಯ ಖಾತೆ ಸಂಖ್ಯೆ ತಿದ್ದುಪಡಿ ಮಾಡಲು ಇದುವರೆಗೂ ಅವಕಾಶ ನೀಡಿಲ್ಲ. ಮಾತ್ರವಲ್ಲದೆ ಆರಂಭದಲ್ಲಿ ರೂಪೇ ಕಾರ್ಡ್ ಮೂಲಕ ಅಪ್‍ಲೋಡ್ ಆದ ರೈತರಿಗೆ ಮಾತ್ರ ಸಾಲ ಮನ್ನಾ ಸೌಲಭ್ಯ ದೊರೆತಿದೆ ಎಂದರು.
ಆದುದರಿಂದ ಈ ಸಮಸ್ಯೆ ಪರಿಹರಿಸಲು ತಂತ್ರಾಂಶದಲ್ಲಿ ಉಳಿತಾಯ ಖಾತೆ ಸಂಖ್ಯೆ ಎಡಿಟ್ ಮಾಡಲು ಅವಕಾಶ ನೀಡಬೇಕು. ಅಥವಾ ಈ ಹಿಂದೆ 50 ಸಾವಿರ ಸಾಲ ಮನ್ನಾ ಯೋಜನೆ ನೀಡಿದಂತೆ ನೇರವಾಗಿ ಡಿಸಿಸಿ ಬ್ಯಾಂಕ್ ಮೂಲಕ ಸಹಕಾರ ಸಂಘಗಳ ಚಾಲ್ತಿ ಖಾತೆಗೆ ವರ್ಗಾಯಿಸಿ ನಂತರ ಸದಸ್ಯರ ಖಾತೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಪಡಿತರ ನವೀಕರಣಗೊಳಿಸಿದ ಸಂದರ್ಭದಲ್ಲೂ ರೈತರು ಸಾಲ ಮನ್ನಾ ಯೋಜನೆಯಿಂದ ವಂಚಿತರಾಗುವ ಪ್ರಸಂಗ ಉಂಟಾಗುತಿದೆ. ವಿವಿಧ ಕಾರಣಗಳಿಗಾಗಿ ಪಡಿತರ ನವೀಕರಿಸಿದಾಗ ಹೊಸ ಕಾರ್ಡ್ ಎಂದು ನಮೂದಾಗುತ್ತದೆ. ಹಳೆಯ ಪಡಿತರ ಚೀಟಿ ನವೀಕರಿಸಿದ ಅರ್ಹ ರೈತರಿಗೆ ಸಾಲ ಮನ್ನಾ ನೀಡಬೇಕು. ಈ ಹಿಂದಿನ ಸುತ್ತೋಲೆಯಂತೆ ಆದಾಯ ತೆರಿಗೆ ಮತ್ತಿತರ ವಿಚಾರಗಳನ್ನು ನಮೂದಿಸಿದ ಕಾರಣ ತಂತ್ರಾಂಶವು ಅಂತಹ ರೈತರ ಸಾಲ ಮನ್ನಾ ಮೊತ್ತವನ್ನು ತಡೆ ಹಿಡಿದಿದೆ. ರೈತರು ಸ್ವಯಂ ತೆರಿಗೆ ಪಾವತಿದಾರರಲ್ಲದ ಕಾರಣ ಈ ಹಿಂದೆ ಈ ರೀತಿ ನಮೂದಿಸಿದ ರೈತರ ಮಾಹಿತಿ ಪಡೆದು ಅರ್ಹರಿಗೆ ಸಾಲ ಮನ್ನಾ ಸವಲತ್ತು ನೀಡಬೇಕು ಎಂದು ಅವರು ಒತ್ತಾಯಿಸಿದರು.
ನ.5 ರಂದು ಧರಣಿ ಸತ್ಯಾಗ್ರಹ ಸುದರ್ಶನ ಪಾತಿಕಲ್ಲು.
ಸಾಲ ಮನ್ನಾ ವಿಚಾರದಲ್ಲಿ ತಮ್ಮದಲ್ಲದ ತಪ್ಪಿಗೆ ಜಿಲ್ಲೆಯ ರೈತರಿಗೆ ಅನ್ಯಾಯ ಆಗಿದೆ. ಆದುದರಿಂದ ರೈತರಿಗೆ ನ್ಯಾಯ ಒದಗಿಸಿ ಕೊಡಲು ಸರಕಾರ ಕ್ರಮ ಕೈಗೊಳ್ಳಬೇಕು. ರೈತರ ಸಾಲ ಮನ್ನಾ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಫಸಲ್ ಭೀಮಾ ಮೊತ್ತವನ್ನು ರೈತರ ಖಾತೆಗೆ ಜಮೆ ಆಗಬೇಕು. ಮುಂದಿನ 15 ದಿನದಲ್ಲಿ ಪಾವತಿಯಾಗದಿದ್ದರೆ ಮಲೆನಾಡು ಜಂಟಿ ಹಿತರಕ್ಷಣಾ ವೇದಿಕೆಯ ವತಿಯಿಂದ ನ.5 ರಂದು ಪುತ್ತೂರು ಸಹಾಯಕ ಕಮೀಷನರ್ ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ವೇದಿಕೆಯ ಸದಸ್ಯ ಸುದರ್ಶನ ಪಾತಿಕಲ್ಲು ಹೇಳಿದರು. ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದರು.