ಸುಳ್ಯ: ಸಾಲಮನ್ನಾ ಯೋಜನೆಯಲ್ಲಿ ಮಂಜೂರಾದ 4965 ರೈತರ ಹಣ ಹಿಂದಕ್ಕೆ ಹೋಗಿದೆ. ಖಾತೆ ಸಂಖ್ಯೆ ತಪ್ಪು ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ 34.34 ಕೋಟಿ ರೂ ಮಂಜೂರಾಗಿದ್ದರೂ ರೈತರ ಖಾತೆಗೆ ಜಮೆ ಆಗಿಲ್ಲ. ಇದು ಸಹಕಾರಿ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿ.
ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.
ಸುಳ್ಯ ತಾಲೂಕಿನಲ್ಲಿ ಒಟ್ಟು 14,114 ಮಂದಿ ಸಾಲ ಮನ್ನಾ ಯೋಜನೆ ಪಡೆಯಲು ಅರ್ಹರಾಗಿದ್ದು 118.12 ಕೋಟಿ ಬೇಡಿಕೆ ಇದೆ. ಇದರಲ್ಲಿ 11,106 ಮಂದಿಗೆ 83.38 ಕೋಟಿ ಮಂಜೂರಾಗಿತ್ತು. ಇದರಲ್ಲಿ 2000 ಮಂದಿಯ ಖಾತೆಗೆ ರೂ 14,11,76,000 ಜಮೆ ಆಗಿದೆ. ಖಾತೆ ಸಂಖ್ಯೆಯ ಬದಲಾವಣೆ ಮತ್ತು ಕೆಲವು ತಾಂತ್ರಿಕ ಸಮಸ್ಯೆಯಿಂದ 4,965 ಮಂದಿಯ ಹಣ ಹಿಂದಕ್ಕೆ ಹೋಗಿದೆ ಎಂದು ಅಧಿಕಾರಿಗಳು ಹೇಳಿದರು. ಈ ಕುರಿತು ಸಭೆಯಲ್ಲಿ ಭಾರೀ ಚರ್ಚೆ ನಡೆಯಿತು.
ಸಹಕಾರಿ ಇಲಾಖೆಯ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದ ಕಾರಣ ಮತ್ತು ಸರಿಯಾಗಿ ದಾಖಲಾತಿ ಮಾಡದ ಕಾರಣ ಹಣ ಹಿಂದಕ್ಕೆ ಹೋಗಿ ರೈತರಿಗೆ ಅನ್ಯಾಯ ಆಗಿದೆ ಎಂದು ಜಿ.ಪಂ.ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ ಹೇಳಿದರು. ಯಾವ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಎಷ್ಟು ಮಂದಿಯ ಹಣ ಹಿಂದಕ್ಕೆ ಹೋಗಿದೆ, ಹಿಂದಕ್ಕೆ ಹೋಗಲು ಏನು ಕಾರಣ ಎಂಬ ಕುರಿತು ವಿಸ್ತೃತವಾದ ವರದಿ ಕೊಡಿ ಎಂದು ಶಾಸಕ ಎಸ್.ಅಂಗಾರ ಸೂಚನೆ ನೀಡಿದರು. ಇದನ್ನು ಸರಿಪಡಿಸಿ ಹಣ ಪುನಹಾ ಬರಲು ಅವಕಾಶ ಇದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಆಯಾ ಗ್ರಾಮದಲ್ಲಿ ಜನರಿಗೆ ಮಾಹಿತಿ ನೀಡಿ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮ ಸಭೆಗಳಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕು ಎಂದು ಶಾಸಕರು ಸೂಚಿಸಿದರು. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಒಟ್ಟು 17,998 ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ 438 ಅರ್ಜಿ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಾಣಿ-ಮೈಸೂರು ಹೆದ್ದಾರಿ ನವೀಕರಣಕ್ಕೆ 26 ಕೋಟಿ: ಮಾಣಿ-ಮೈಸೂರು ಹೆದ್ದಾರಿಯ ನವೀಕರಣಕ್ಕೆ ಒಟ್ಟು 26 ಕೋಟಿ ಅನುದಾನ ಬಿಡುಗಡೆಯಾಗಿದೆ. ಮಾಣಿಯಿಂದ-ಜಾಲ್ಸೂರು ತನಕ 14 ಕೋಟಿ ಮತ್ತು ಜಾಲ್ಸೂರಿನಿಂದ ಸಂಪಾಜೆ ತನಕ 12 ಕೋಟಿ ಬಿಡುಗಡೆಯಾಗಿದ್ದು ಟೆಂಡರ್ ಹಂತದಲ್ಲಿದೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ತಿಯಾಗಲಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಅರಂಬೂರು ಸೇತುವೆಯ ಕಾಮಗಾರಿ ಕೂಡಲೇ ಪೂರ್ತಿ ಮಾಡಲು ಗುತ್ತಿಗೆದಾರರಿಗೆ ನೋಟೀಸ್ ನೀಡಲಾಗಿದ್ದು ಮಾರ್ಚ್‍ಗಿಂತ ಮುಂಚಿತವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಕಾಮಗಾರಿ ಪೂರ್ತಿ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ತಿಳಿಸಿದರು.
ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಆಶಾ ತಿಮ್ಮಪ್ಪ ಮಾತನಾಡಿದರು. ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ವೃತ್ತ ನಿರೀಕ್ಷಕ ಆರ್.ಸತೀಶ್‍ಕುಮಾರ್ ಉಪಸ್ಥಿತರಿದ್ದರು.