ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.1 ಹಾಗೂ 2 ರಂದು ನಡೆಯುವ ಚಂಪಾಷಷ್ಠಿ ಬಗ್ಗೆ ಪೂರ್ವಬಾವಿ ಸಿದ್ಧತಾ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಸಲು ಸೋಮವಾರ ಸುಬ್ರಹ್ಮಣ್ಯದಲ್ಲಿ ಸಭೆ ನಡೆಯಿತು.
ಸಹಾಯಕ ಕಮೀಶನರ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತೀ ವರ್ಷದಂತೆ ಸಂಭ್ರಮ, ಸಡಗರದಿಂದ “ಸುಬ್ರಹ್ಮಣ್ಯ ಜಾತ್ರೆ” ನಡೆಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಪ್ರಮುಖವಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ, ಭದ್ರತೆ ಸೇರಿದಂತೆ ಸ್ವಚ್ಛತಾ ಕಾರ್ಯಗಳು, ಬ್ರಹ್ಮರಥ ಎಳೆಯುವ ಸಂದರ್ಭ ಪಾಸ್ ವಿತರಣೆ , ಹೊರೆಕಾಣಿಕೆ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯಿತು. ನ.9 ರಂದು ಭದ್ರತೆ ಹಾಗೂ ರಸ್ತೆ ದುರಸ್ತಿ ಬಗ್ಗೆ ವಿಶೇಷ ಸಭೆ ನಡೆಸಲು ಇದೇ ವೇಳೆ ನಿರ್ಧರಿಸಲಾಯಿತು.
ಸಭೆಯಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲು, ಜಿಪಂ ಸದಸ್ಯೆ ಆಶಾ ತಿಮ್ಮಪ್ಪ, ತಾಪಂ ಸದಸ್ಯ ಅಶೋಕ್ ನೆಕ್ರಾಜೆ, ಗ್ರಾಪಂ ಅಧ್ಯಕ್ಷೆ ಸುಶೀಲಾ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಸದಸ್ಯರು, ಪೊಲೀಸ್ ಇಲಾಖೆಯ ಅಧಿಕಾರಿ ಚಂದಪ್ಪ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಣ್ಣೇಗೌಡ ಹಾಗೂ ಸ್ಥಳೀಯ ಪ್ರಮುಖರು ಭಾಗವಹಿಸಿದ್ದರು.