ಸುಬ್ರಹ್ಮಣ್ಯ: ಎಲ್ಲೆಲ್ಲೂ ಮಕ್ಕಳ ಕಲರವ. ಇಂಪಾದ ಸಂಗೀತ ಕೇಳುತ್ತಲೇ ಮೈಮರೆಯುವ ಕ್ಷಣ. ಅದರ ಜೊತೆಗೆ ಸಂಗೀತದ ಬಗ್ಗೆ ಚರ್ಚೆ. ಇಂತಹದ್ದೊಂದು ಸಂದರ್ಭ ಕಂಡದ್ದು ಕುಕ್ಕೆ ಸುಬ್ರಹ್ಮಣ್ಯದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಗಾರದಲ್ಲಿ.
ಶ್ರೀ ಸರಸ್ವತೀ ಸಂಗೀತ ಶಾಲೆ ಸುಬ್ರಹ್ಮಣ್ಯ ಇದರ ವತಿಯಿಂದ ಮೂರು ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಗಾರ ಆದಿಸುಬ್ರಹ್ಮಣ್ಯದಲ್ಲಿ ಉದ್ಘಾಟನೆಗೊಂಡಿತು. ಇತ್ತೀಚೆಗೆ ಸಂಗೀತ ಕ್ಷೇತ್ರದ ಕಡೆಗೆ ಯುವ ಸಮೂಹ ಆಕರ್ಷಣೆಯನ್ನು ಹೊಂದುತ್ತಿದೆ. ಎಳವೆಯಿಂದಲೇ ಮಕ್ಕಳು ಸಂಗೀತ ಕಲಿಯುತ್ತಿದ್ದಾರೆ. ಹೀಗಾಗಿ ಸಂಗೀತದ ಮನಸ್ಸುಗಳು ಈಗ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಸುಬ್ರಹ್ಮಣ್ಯದ ಸಂಗೀತ ಶಾಲೆ .
ಇನ್ನೊಂದು ಕಡೆ ಧರ್ಮಸ್ಥಳ ಬಳಿಯ ನಿಡ್ಲೆ ಸಮೀಪ ಕರುಂಬಿತ್ತಿಲ್ ಎಂಬ ಗ್ರಾಮೀಣ ಭಾಗದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರಿಂದ ಸಂಗೀತದ ಬಗ್ಗೆ ಚರ್ಚೆ, ಪ್ರದರ್ಶನವೂ ಇರುತ್ತದೆ. ಇಲ್ಲೂ ಕೂಡಾ ದಕ್ಷಿಣ ಕನ್ನಡ ಸೇರಿದಂತೆ ವಿವಿದೆಡೆಯ ಸಂಗೀತದ ಮನಸ್ಸುಗಳು ಆಗಮಿಸುತ್ತದೆ. ಹೀಗಾಗಿ ಸಂಗೀತ ಕ್ಷೇತ್ರವು ಇಂದು ಮನೆ ಮನೆಗಳಿಗೆ ತಲಪುತ್ತಿದೆ. ಈ ಸೇವೆಯ ಒಂದು ಅಂಗ ಶ್ರೀ ಸರಸ್ವತೀ ಸಂಗೀತ ಶಾಲೆ. ಸಂಗೀತ ಕ್ಷೇತ್ರದ ಬಗ್ಗೆ ಇನ್ನಷ್ಟು ಅಧ್ಯಯನ ಮಾಡುವ ಕಾರ್ಯಾಗಾರ ಈಗ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದೆ.
ಈ ಶಿಬಿರವನ್ನು ಸುಬ್ರಹ್ಮಣ್ಯದ ಉದ್ಯಮಿ ಹರೀಶ್ ಕಾಮತ್ ಉದ್ಘಾಟಿಸಿ, ” ಸಂಗೀತ ಹಾಗೂ ನೃತ್ಯ ಪ್ರಕಾರಗಳ ಹಲವು ಇವೆ. ಇವುಗಳಲ್ಲಿ ಭಾರತೀಯ ಕರ್ನಾಟಕ ಶಾಸ್ತ್ರೀಯ ಅಳವಡಿಕೆ ಇಂದಿನ ಅಗತ್ಯ. ಸಂಸ್ಕೃತಿ ಉಳಿವಿನಲ್ಲಿ ಸಂಗೀತ ಕಲೆ ಕೊಡುಗೆ ಅಪಾರ ಎಂದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ “ಸಾಹಿತ್ಯ ಕೃಷಿ ಕೆಲಸ ಹೆಚ್ಚಿಸುವ ಕೆಲಸವನ್ನು ಶ್ರೀ ಸರಸ್ವತಿ ಸಂಗೀತ ಶಾಲೆ ನಡೆಸುತ್ತಿದೆ. ಪ್ರಾಚೀನ ಕಾಲದಿಂದಲೂ ಶಾಸ್ತ್ರೀಯ ಕಲೆಗೆ ಒತ್ತು ನೀಡುತ್ತ ಬರಲಾಗಿದೆ. ಇದು ಮುಂದುವರೆಯಲು ಕರ್ನಾಟಕ ಶಾಸ್ತ್ರೀಯ ಕಲಿಕೆಯ ಅವಶ್ಯಕತೆ ಇರುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ವಿದುಷಿ ಕಾಂಚನ ಎಸ್ ಶ್ರುತಿರಂಜನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಸರಸ್ವತೀ ಸಂಗೀತ ಶಾಲೆ ಶಿಕ್ಷಕಿ ವಿದ್ಯಾಗೋವಿಂದ ಪ್ರಸ್ತಾವನೆಗೈದರು. ವಿಜಯಕುಮಾರ್ ನಡುತೋಟ ಸ್ವಾಗತಿಸಿದರು. ಹರೀಶ್ ಬೆದ್ರಾಜೆ ಸ್ವಾಗತಿಸಿದರು. ಪ್ರವೀಣ್ ಕಲ್ಲೆಂಬಿ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಮತ್ತು ಅವನೀಶ ಪ್ರಾರ್ಥಿಸಿದರು.