ಸುಳ್ಯ: ಅ.2 ರಂದು ಮಂಗಳೂರಿನಲ್ಲಿ ನಡೆಯಲಿರುವ ಗಾಂಧಿ ನಡಿಗೆ ಕಾರ್ಯಕ್ರಮದ ಕುರಿತು ಚರ್ಚಿಸಲು ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಆಂತರಿಕ ಸಮಸ್ಯೆ ಸ್ಫೋಟಗೊಂಡು ನಾಯಕರ ಮಧ್ಯೆ ವಾಗ್ವಾದ, ಗದ್ದಲ ಉಂಟಾದ ಘಟನೆ ನಡೆಯಿತು. ಇದರಿಂದ ಅಸಮಾಧಾನಗೊಂಡು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸಭೆಯಿಂದ ಹೊರ ನಡೆಯಲು ಮುಂದಾದ ಪ್ರಸಂಗಕ್ಕೂ ಸೋಮವಾರ ನಡೆದ ಸಭೆ ಸಾಕ್ಷಿಯಾಯಿತು.
ಅ. 2 ರಂದು ಮಂಗಳೂರಿನಲ್ಲಿ ನಡೆಯುವ ಗಾಂಧಿನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಸುಳ್ಯ ನಗರದ ಖಾಸಗೀ ಹೋಟೆಲ್ ಸಭಾಂಗಣದಲ್ಲಿ ನಡೆದಿತ್ತು. ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಮುಖಂಡರು ಹಾಗು ಸುಳ್ಯ ಬ್ಲಾಕ್ ನ ಎಲ್ಲಾ ಪ್ರಮುಖರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ “ಸುಬ್ರಹ್ಮಣ್ಯದಲ್ಲಿ ಹೂವಿನ ಸ್ಟಾಲ್ ಇರಿಸಿದ ಲಕ್ಷ್ಮಿ ಸುಬ್ರಹ್ಮಣ್ಯ ಅವರ ಹೂವಿನ ಸ್ಟಾಲನ್ನು ತೆರವು ಮಾಡಿರುವುದು ಸರಿಯಲ್ಲ. ದೇವಸ್ಥಾನದ ಆಡಳಿತ ಕಾಂಗ್ರೆಸ್ ಕೈಯಲ್ಲಿದ್ದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಆಗಿದೆ ಎಂದು ದೂರಿದರು. ಅಲ್ಲದೆ ಕೆಲವು ಸಹಕಾರಿ ಸಂಘಗಳಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯವರ ಜೊತೆ ಒಳ ಒಪ್ಪಂದ ಮಾಡಿಕೊಂಡು ಗೆಲುವು ಸಾಧಿಸಿದ್ದಾರೆ” ಎಂದು ಆರೋಪಿಸಿದರು.
ಇದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಗಿ ಸಭೆಯಲ್ಲಿ ಮಾತಿನ ಚಕಮಕಿ, ವಾಗ್ವಾದ ನಡೆದು ಗದ್ದಲದ ವಾತಾವರಣ ಉಂಟಾಯಿತು. ಗಾಂಧಿನಡಿಗೆ ಕುರಿತು ಮಾತ್ರ ಚರ್ಚಿಸಿ ಎಂದು ಜಿಲ್ಲಾಧ್ಯಕ್ಷರು ಮತ್ತು ಬ್ಲಾಕ್ ಅಧ್ಯಕ್ಷರು ಪದೇ ಪದೇ ವಿನಂತಿಸಿದರೂ ವಾಗ್ವಾದ ಮುಂದುವರಿದು ಸಭೆಯಲ್ಲಿ ಗದ್ದಲ, ಗೊಂದಲದ ವಾತಾವರಣ ಸೃಷ್ಠಿಯಾಯಿತು.
ಈ ಸಂದರ್ಭದಲ್ಲಿ ಅಸಮಾಧಾನಗೊಂಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಭೆಯಿಂದ ಹೊರ ನಡೆಯಲು ಮುಂದಾದರು. ನಾಯಕರು ಅವರನ್ನು ಸಮಾಧಾನಪಡಿಸಿದರು. ಸಭೆ ಮುಗಿದ ಬಳಿಕ ಕಾರ್ಯಕರ್ತರ ಅಹವಾಲು ನಾಯಕರ ಮುಂದೆ ಇರಿಸಲು ಅವಕಾಶ ನೀಡಲಾಗುವುದು ಎಂದು ಬ್ಲಾಕ್ ಅಧ್ಯಕ್ಷ ಜಯಪ್ರಕಾಶ್ ರೈ ಎಲ್ಲರನ್ನೂ ಸಮಾಧಾನಪಡಿಸಿದ ಬಳಿಕ ಸಭೆ ಮುಂದುವರಿಯಿತು.
ಸಭೆ ಮುಗಿದ ಬಳಿಕ ಪ್ರತ್ಯೇಕವಾಗಿ ಖಾಸಗೀ ಹೋಟೆಲ್ ನ ಕೊಠಡಿಯಲ್ಲಿ ನಾಯಕರ ಜೊತೆ ಅಹವಾಲು ಮಂಡಿಸಲು ಅವಕಾಶ ನೀಡಲಾಯಿತು.