ಸುಳ್ಯ: ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರ ವರ್ಗಾವಣೆ ಆದೇಶಕ್ಕೆ ತಡೆ ಬಿದ್ದಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಕುಮಾರಸ್ವಾಮಿ ಸರಕಾರ ಜುಲೈ ತಿಂಗಳಲ್ಲಿ ಮಾಡಿದ್ದ ಎಲ್ಲಾ ವರ್ಗಾವಣೆಗಳನ್ನು ತಡೆ ಹಿಡಿಯಲು ಆದೇಶ ನೀಡಿದ್ದರು. ಈ ಹಿನ್ನಲೆಯಲ್ಲಿ ಸುಳ್ಯ ತಹಶೀಲ್ದಾರ್ ವರ್ಗಾವಣೆ ಆದೇಶಕ್ಕೂ ತಡೆ ಬಿದ್ದಿದೆ.
ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರು ಅಧಿಕಾರವನ್ನು ಕಡಬ ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಿ ಸುಳ್ಯದಿಂದ ತೆರಳಿದ್ದರು. ಇದೀಗ ವರ್ಗಾವಣೆಗೆ ತಡೆ ಆಗಿರುವ ಹಿನ್ನಲೆಯಲ್ಲಿ ಕೂಡಲೇ ಮತ್ತೆ ಸುಳ್ಯದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಅವರಿಗೆ ಮೇಲಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜನರ ಪ್ರಾರ್ಥನೆಯ ಫಲ- ಕುಂಞಿ ಅಹಮ್ಮದ್:
ವರ್ಗಾವಣೆಗೆ ತಡೆಯಾಗಿರುವ ಹಿನ್ನಲೆಯಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಆದೇಶ ಬಂದಿರುವುದನ್ನು ಕುಂಞಿ ಅಹಮ್ಮದ್ ಖಚಿತಪಡಿಸಿಕೊಂಡಿದ್ದಾರೆ. ವರ್ಗಾವಣೆ ಆಗಿದೆ ಎಂದು ತಿಳಿದಾಗ ಜನರ ಪ್ರೀತಿ ನೋಡಿ ನಿಜಕ್ಕೂ ವಿಸ್ಮಯಗೊಂಡಿದ್ದೇನೆ. ಜನರ ಪ್ರಾರ್ಥನೆಯ ಫಲದಿಂದ ಮತ್ತೆ ಇಲ್ಲೇ ಮುಂದುವರಿಯಲು ಸಾಧ್ಯವಾಗಿದೆ ಎಂಬುದು ನನ್ನ ಅನಿಸಿಕೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಜನರ ಮತ್ತು ಜನ ಪ್ರತಿನಿಧಿಗಳ ಸಹಕಾರದಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ. ಸದ್ಯದಲ್ಲಿಯೇ ಪ್ಲಾಸ್ಟಿಕ್ ಮುಕ್ತ ಸುಳ್ಯ ಆಂದೋಲನ ಪ್ರಾರಂಭಿಸುತ್ತೇನೆ. ಸ್ವಚ್ಛತಾ ಆಂದೋಲನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಹರ್ಷ:
ಹೊಸ ಸರಕಾರ ಬಂದು ಹಿಂದಿನ ಸರಕಾರ ಮಾಡಿದ್ದ ಜುಲೈ ತಿಂಗಳ ವರ್ಗಾವಣೆ ಆದೇಶ ರದ್ದುಗೊಂಡಿರುವುದರಿಂದ ತಹಶೀಲ್ದಾರ್ ವರ್ಗಾವಣೆಗೆ ತಡೆ ಬಿದ್ದಿರುವುದಕ್ಕೆ ಸಾರ್ವಜನಿಕ ವಲಯದಲ್ಲೂ ಹರ್ಷ ವ್ಯಕ್ತವಾಗಿದೆ. ತಹಶೀಲ್ದಾರ್ ಕುಂಞಿ ಅಹಮ್ಮದ್ ವರ್ಗಾವಣೆ ರದ್ದು ಮಾಡಬೇಕೆಂದು ಪ್ರತಿಭಟನೆಗಳು ನಡೆದಿತ್ತು. ವರ್ಗಾವಣೆ ರದ್ದುಪಡಿಸಲು ಹಲವು ಸಂಘ ಸಂಸ್ಥೆಗಳು, ಸಾರ್ವಜನಿಕರು ಮೇಲಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕವು ವ್ಯಾಪಕ ಒತ್ತಾಯ ಕೇಳಿ ಬಂದಿತ್ತು. ಕೇವಲ ಐದು ತಿಂಗಳಲ್ಲಿ ಜನಪರ ಅಧಿಕಾರಿ ಎಂದು ಹೆಸರು ಗಳಿಸಿದ್ದ ತಹಶೀಲ್ದಾರ್ ವರ್ಗಾವಣೆಯಿಂದ ಜನರಲ್ಲಿ ತೀವ್ರ ನಿರಾಶೆ ಉಂಟಾಗಿತ್ತು. ಇದೀಗ ವರ್ಗಾವಣೆಗೆ ಬ್ರೇಕ್ ಬಿದ್ದಿರುವುದು ಹರ್ಷ ತಂದಿದೆ.