ಸುಳ್ಯ: ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಮತ್ತು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅ.21 ರಂದು ಪರಿಶಿಷ್ಟ ಜಾತಿಯ ಸಮುದಾಯದವರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿ ಶಿಬಿರವನ್ನು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮಹಮ್ಮಾಯಿ ದೇವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೀನಾ ಕರುಣಾಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಹಿತಿ ಶಿಬಿರದ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳಲು ಕರೆನೀಡಿದರು. ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ಲಡ್ಕ ಇವರು ಈ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿ ಇದರ ಉಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕಲು ತಿಳಿ ಹೇಳಿದರು. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಮುಖ್ಯಸ್ಥರಾದ ಡಾ. ರಮೇಶ್ ಇವರು ಕೃಷಿ ವಿಜ್ಞಾನ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಕೇದಾರನಾಥ ಸಮಗ್ರ ಕೃಷಿ ಬಗ್ಗೆ ಮಾಹಿತಿ ನೀಡಿದರು.
ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿಯವರಾದ ಡಾ. ಈರದಾಸಪ್ಪ ಪರಿಶಿಷ್ಟ ಜಾತಿ ಉಪಯೋಜನೆಯ ಕುರಿತು ವಿವರವಾಗಿ ಮಾಹಿತಿ ನೀಡಿ ಫಲಾನುಭವಿಗಳಿಗೆ ಅರ್ಜಿಗಳನ್ನು ವಿತರಿಸಿದರು. ಅಜ್ಜಾವರದ ಸಾವಯವ ಕೃಷಿಕರಾದ ಭವಾನಿಶಂಕರ್ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸ್ವಾಗತಿಸಿ ವಂದಿಸಿದರು.