ಸುಳ್ಯ: ವಾಣಿಜ್ಯ ಬ್ಯಾಂಕ್ ಗಳಲ್ಲಿ 1083 ಮಂದಿಗೆ ಮತ್ತು ಸಹಕಾರಿ ಸಂಘಗಳ ಮೂಲಕ 14,119 ಮಂದಿಗೆ ಒಟ್ಟು ಸುಳ್ಯ ತಾಲೂಕಿನಲ್ಲಿ 15,202 ಮಂದಿಗೆ ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯ ಒಂದು ಲಕ್ಷ ಹಣ ಸಂದಾಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಳಿದ ರೈತರಿಗೂ ಸಿಗುವಂತೆ ಮಾಡಲು ಕ್ರಮ ಜರುಗಿಸಲು ಮತ್ತು ಖಾತೆಗೆ ನೇರ ಹಣ ಜಮೆ ಆದ ಮಾಹಿತಿಯನ್ನು ರೈತರಿಗೆ ತಿಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಕಂದಾಯ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದ್ದು ಸಮಸ್ಯೆಗಳನ್ನು ತಿಳಿದು ಕೆಲವೊಂದು ಕಂದಾಯ ಕಾನೂನುಗಳನ್ನು ಸರಳೀಕರಣ ಮಾಡಲು ಕಾನೂನು ತಿದ್ದುಪಡಿ ಮಾಡಲಾಗುವುದು. ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸರಕಾರಿ ಭೂಮಿಯ ಸಾಗುವಳಿ ಮಾಡಿ ಹಕ್ಕು ಪತ್ರ ನೀಡಲಾಗುತ್ತಿದ್ದು 4.38 ಸೆಂಟ್ಸ್ ವರೆಗಿನ ಸ್ಥಳವನ್ನು ರೈತರಿಗೆ ಮಂಜೂರು ಮಾಡಲಾಗುತ್ತಿದೆ. ಹೀಗೆ ಸುಳ್ಯ ತಾಲೂಕಿನಲ್ಲಿ 20 ಸಾವಿರ ಎಕ್ರೆ ಭೂಮಿ ಕೃಷಿಕರಿಗೆ ಮಂಜೂರು ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುಳ್ಯದಲ್ಲಿ 94ಸಿ ಯೋಜನೆಯಲ್ಲಿ ಅತೀ ಹೆಚ್ಚು ಅರ್ಜಿಗಳು ತಿರಸ್ಕಾರಗೊಂಡಿರುವುದು ಕಂಡು ಬರುತಿದೆ. ಇದರ ಮರು ಪರಿಶೀಲನೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಸಹಾಯಕ ಕಮೀಷನರ್ ಡಾ.ಹೆಚ್.ಕೆ.ಕೃಷ್ಣಮೂರ್ತಿ, ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಉಪಸ್ಥಿತರಿದ್ದರು.