ಸುಳ್ಯ ತಾಲೂಕು ಸಮ್ಮೇಳನಾಧ್ಯಕ್ಷರ ಭಾಷಣದ ಸಾರಾಂಶ

January 19, 2020
7:47 PM

ಸುಳ್ಯ: ಕನ್ನಡದ ಆಡುಭಾಷೆಗಳಲ್ಲಿ ಹಲವು ಪ್ರಾದೇಶಿಕ ಭಿನ್ನತೆಗಳಿದ್ದರೂ ನಿಜವಾದ ಕನ್ನಡತನ ಪ್ರಾದೇಶಿಕ ಆಡುಭಾಷೆಗಳಲ್ಲಿ ಕಾಣಲು ಸಾಧ್ಯ. ಆದರೆ ಕನ್ನಡತನ ಇನ್ನೂ ಜೀವಂತವಾಗಿ ಉಳಿದಿರುವ ಈ ಉಪ ಭಾಷೆಗಳು ಕೂಡ ನಿಧಾನವಾಗಿ ಅಳಿವಿನಂಚಿನತ್ತ ಸಾಗುತ್ತಿದೆಯೇ ಎಂಬ ಆತಂಕ ಇದೆ ಎಂದು ಸುಳ್ಯ ತಾಲೂಕು 24ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೃಷ್ಣ ಶಾಸ್ತ್ರಿ ಮರ್ಕಂಜ (ಕೃ.ಶಾ.ಮರ್ಕಂಜ) ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

ಇದು ಕೇವಲ ಸುಳ್ಯಕ್ಕೆ ಮಾತ್ರ ಸೀಮಿತವಲ್ಲ ಇಡೀ ಕರ್ನಾಟಕಕ್ಕೆ ಅನ್ವಯವಾಗುತ್ತದೆ. ಕನ್ನಡದ ಉಪಭಾಷೆಗಳು ಭಾಷಾ ಕೀಳರಿಮೆಗೆ ಒಳಗಾಗಿ ಶಿಷ್ಟ ಕನ್ನಡದತ್ತ ಮುಖ ಮಾಡಿದ್ದರೆ, ಸ್ವಯಂ ಕನ್ನಡದ ಸ್ಥಿತಿಯೂ ಇತ್ತೀಚೆಗೆ ತೀರಾ ಕಳವಳಕಾರಿಯಾಗಿದೆ. ಇಂಗ್ಲಿಷ್ ಭಾಷಾ ವ್ಯಾಮೋಹವು ಕನ್ನಡವನ್ನು ಇಡಿಯಾಗಿ ನುಂಗಿ ಹಾಕುತ್ತಿದೆ. ಇಂಗ್ಲೀಷರು ಬರುವಾಗ ಕೇವಲ ಕನ್ನಡ ಪ್ರದೇಶಕ್ಕೆ ಮಾತ್ರ ಬಂದಿಲ್ಲ. ಆದರೂ ಕನ್ನಡಕ್ಕೊದಗಿದಷ್ಟು ಆತಂಕ ನೆರೆಯ ತಮಿಳು, ತೆಲುಗು, ಮಲಯಾಳ ಭಾಷೆಗಳಿಗೆ ಉಂಟಾಗದಿರುವುದು ಆಶ್ಚರ್ಯಕರ ಮತ್ತು ಅಧ್ಯಯನಕ್ಕೊಳಗಾಗಬೇಕಾದ ವಿಚಾರವಾಗಿದೆ. ಕನ್ನಡವು ಪರಿವರ್ತನೆಗೆ ಸ್ಪಂದಿಸುತ್ತ ವಿಕಾಸದ ಹಾದಿಯಲ್ಲಿ ಸಾಗುತ್ತಿದೆಯೆಂದು ಕೆಲವರು ವ್ಯಾಖ್ಯಾನಿಸುತ್ತಿದ್ದರೂ ಈ ಹೊಸತನದ ಹಪಹಪಿಕೆಯು ಕನ್ನಡದ ಅಸ್ತಿತ್ವವನ್ನೇ ಅಲುಗಾಡಿಸುವಷ್ಟು ಅತಿರೇಕಕ್ಕೆ ಹೋಗದಂತೆ ಎಚ್ಚರವಹಿಸಬೇಕಾಗಿರುವುದು ನಮ್ಮೆಲ್ಲರ ತುರ್ತು ಜವಾಬ್ದಾರಿಯಾಗಿದೆ ಎಂದು ಎಚ್ಚರಿಸಿದರು. ಒಂದು ಸೃಜನಶೀಲ ಸಾಹಿತ್ಯ ಕೃತಿಯ ಖ್ಯಾತಿ ಅಥವಾ ಸಾರ್ಥಕತೆಗೆ ಮಾನದಂಡಗಳೇನು ಎನ್ನುವ ಪ್ರಶ್ನೆಗೆ ಅದು ಜನಮಾನಸದಲ್ಲಿ ಯಾವುದೋ ರೂಪದಲ್ಲಿ ಸ್ಥಾಯಿಯಾಗಿ ಮತ್ತೆ ಮತ್ತೆ ಅನುರಣನಗೊಳ್ಳುತ್ತ ಮಾತಿನ ಭಾಗವೇ ಆಗಿ ಹೋಗುವುದು. ಒಂದು ಸಾಹಿತ್ಯ ಕೃತಿಯ ಸಾರ್ಥಕತೆ ಇರುವುದು ಚಿರಕಾಲ ಉಳಿಯುವ ಅದರ ಉದ್ಧರಣ ಯೋಗ್ಯತೆಯಲ್ಲಿ ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯದ ಬೆಳವಣಿಗೆಯೊಂದಿಗೆ ಕನ್ನಡ ಭಾಷೆಯೂ ಕಾಲಕಾಲಕ್ಕೆ ಹೊಸತನಕ್ಕೆ ತೆರೆದುಕೊಳ್ಳುತ್ತ ಬಂದಿರುವ ಚರಿತ್ರೆಯನ್ನು ನಾವಿಂದು ದಾಖಲಿಸಿಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಹಳೆಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡವೆಂಬುದಾಗಿ ಇದನ್ನು ವಿಂಗಡಿಸಲಾಗಿದೆ. ಹಳೆಗನ್ನಡದ ಭಾಷಾಶೈಲಿಯಾಗಲೀ ಕೆಲವು ಅಕ್ಷರ ವಿನ್ಯಾಸಗಳಾಗಲೀ ಈಗ ಪ್ರಚಲಿತದಲ್ಲಿಲ್ಲ.

Advertisement

ಒಂದು ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರವು ಭಾಷೆಯ ಒಲವನ್ನು ಉದ್ದೀಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಆದರೆ ಕ್ರಮೇಣ ಸಾಹಿತ್ಯದ ಓದುಗರು ಗಣನೀಯವಾಗಿ ಕಡಿಮೆಯಾಗುತ್ತ ಬಂದಂತೆ ಈ ಒಲವು ಮೂಡಿಸುವ ಶಕ್ತಿ, ಸಾಮರ್ಥ್ಯ ಗಳು ಮಾಧ್ಯಮ ಕ್ಷೇತ್ರಕ್ಕೆ ವರ್ಗಾಯಿಸಲ್ಪಟ್ಟಿದೆ. ಮಾಧ್ಯಮಗಳು ಪರಸ್ಪರ ಪೈಪೋಟಿಗೆ ಇಳಿದವರಂತೆ ಒಂದರಿಂದ ಇನ್ನೊಂದು ಪ್ರಭಾವಕ್ಕೋ ಅನುಕರಣೆಗೋ ಒಳಗಾಗುತ್ತಿರುವುದು ಭಾಷೆಯ ಬೆಳವಣಿಗೆ ಹಾಗೂ ಸಂವಹನದ ದೃಷ್ಟಿಯಿಂದ ಆರೋಗ್ಯಕರ ವಿದ್ಯಮಾನಗಳೇ. ಪಾರಿಭಾಷಿಕ ಪದಪುಂಜದ ಸೃಷ್ಟಿಯಂತಹಾ ಸೃಜನಶೀಲತೆ ಪತ್ರಿಕೋದ್ಯಮದ ಸ್ವಾಗತಾರ್ಹ ಬೆಳವಣಿಗೆಗಳು ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡ ಬದುಕನ್ನು ಕಟ್ಟುವ ಕಾಯಕದಲ್ಲಿ ಶಿಕ್ಷಣಕ್ಷೇತ್ರಕ್ಕೂ ಮಹತ್ವದ ಪಾತ್ರವಿದೆ. ಆದರೆ ಈಗ ಶಿಕ್ಷಣವೆಂದರೆ ಹೊಟ್ಟೆಪಾಡಿಗಾಗಿ ಕಲಿತುಕೊಳ್ಳಬೇಕಾದ ವಿದ್ಯೆ ಎಂಬ ಭಾವನೆ ಮೂಡುತ್ತಿದೆ. ಇಂಗ್ಲಿಷ್ ಕಲಿಯದಿದ್ದರೆ ಔದ್ಯೋಗಿಕ ಭವಿಷ್ಯವಿಲ್ಲವೆಂಬ ಭಯ ಆವರಿಸಿದೆ. ಜಾಗತಿಕ ಸಂವಹನಕ್ಕಾಗಿ ಇಂಗ್ಲಿಷ್ ಅನಿವಾರ್ಯವೆಂಬ ಮನೋಭಾವ ಆಳವಾಗಿ ಬೇರೂರಿದೆ. ಇದರ ಪರಿಣಾಮವಾಗಿ ಇಂದು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಇಂಗ್ಲಿಷ್ ಒಂದು ಭಾಷೆಯಷ್ಟೇ ಹೊರತು ಜ್ಞಾನವಲ್ಲವೆಂಬ ಅರಿವು ನಮ್ಮಲ್ಲಿ ಜಾಗೃತವಾಗಬೇಕಾಗಿದೆ. ಮಕ್ಕಳಿಗೆ ಇಂಗ್ಲೀಷ್ ಭಾಷೆ ಬೇಕು, ಆದರೆ ಕನ್ನಡ ಅಸ್ಪೃ ಶ್ಯವಾಗಬಾರದು. ಕನ್ನಡವೇ ಪ್ರಧಾನ ಭಾಷೆಯಾಗಿ ಕನ್ನಡದ ಮೂಲಕವೇ ಇಂಗ್ಲಿಷನ್ನು ಕಲಿಸಬೇಕು. ಇಂಗ್ಲಿಷ್‍ನ ಮೂಲಕವೇ ಕನ್ನಡವನ್ನು ಉಳಿಸುವ ಹೊಸ ಚಿಂತನೆಯೊಂದು ಜಾರಿಗೆ ಬರಬೇಕಿದೆ ಎಂದು ಅವರು ಹೇಳಿದರು.

ಇಂದಿನ ಶಿಕ್ಷಣ ಕ್ರಮದಲ್ಲಿ ಮಕ್ಕಳಿಗೆ ಪಾಠಗಳು ಹೊರೆಯಾಗುತಿದೆ, ರಜಾದಿನಗಳಲ್ಲಿ ನಡೆಯುವ ಬೇಸಗೆ ಶಿಬಿರಗಳು ಮಕ್ಕಳ ಹಕ್ಕುಗಳನ್ನು, ಬಾಲ್ಯವನ್ನೂ ಅವರಿಗರಿವಿಲ್ಲದೆಯೇ ಕಸಿದುಕೊಳ್ಳುತ್ತದೆ ಎಂಬ ಭಾವನೆ ಮೂಡಿದೆ. ವರ್ಷವಿಡೀ ಶಾಲೆ, ಕಲಿಕೆ, ಓದು ಎಂಬ ವರ್ತುಲದೊಳಗೇ ಕಾಲಕಳೆಯುವ ಮಕ್ಕಳನ್ನು ವರ್ಷಕ್ಕೆ ಕನಿಷ್ಠ ಒಂದು ತಿಂಗಳಾದರೂ ಸ್ವತಂತ್ರವಾಗಿ ಬಿಡಬೇಕಾಗಿದೆ. ಶಾಲಾ ಶನಿವಾರದ ಅಪರಾಹ್ನದ ರಜೆಯನ್ನು ಪರಿಷ್ಕರಿಸಿ ತಿಂಗಳ ಒಂದನೇ ಮತ್ತು ಮೂರನೇ ಶನಿವಾರ ಇಡೀ ರಜೆ, ಉಳಿದ ಶನಿವಾರ ಇಡೀ ಶಾಲೆ ಇರುವಂತೆ ಮಾಡಬೇಕೆಂದು ಅವರು ಸಲಹೆ ನೀಡಿದರು. ಏಳನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ಬೇಕೇ ಬೇಡವೇ ಎಂಬ ಚರ್ಚೆ ನಡೆಯುತಿದೆ. ತಜ್ಞರ ಅಭಿಮತದಂತೆಯೇ ಚಾಲ್ತಿಯಲ್ಲಿರುವ ಈಗಿನ ಪದ್ಧತಿಯನ್ನು ಬದಲಿಸಬೇಕಾಗಿಲ್ಲ.

Advertisement

ದಕ್ಷಿಣ ಕನ್ನಡ ಅಥವಾ ಕರಾವಳಿ ಕನ್ನಡದ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವನಶೈಲಿಯ ಮೇಲೆ ಗಾಢ ಪ್ರಭಾವವನ್ನು ಬೀರಿದೆ. ಹಾಗೆಯೇ ಕನ್ನಡಿಗರ ಅಕಾಡೆಮಿಕ್ ಶಿಸ್ತು, ಬೌದ್ಧಿಕ ಮಟ್ಟ, ಜೀವನ ವಿಧಾನಗಳು ಇತರೆಡೆಗಳಿಗಿಂತ ಭಿನ್ನವಾಗಿ ಗುರುತಿಸಲ್ಪಡುವುದಕ್ಕೆ ನಮ್ಮ ಬದುಕಿನ ಭಾಗವೇ ಆದ ಯಕ್ಷಗಾನದ ಪ್ರಭಾವವೇ ಕಾರಣ. ದೃಶ್ಯ, ಶ್ರವ್ಯ ಪರಂಪರೆಯ ಮೂಲಕ ಜನಮಾನಸದಲ್ಲಿ ಪೌರಾಣಿಕ ಕಾವ್ಯ, ಇತಿಹಾಸಗಳನ್ನು ಗಟ್ಟಿಯಾಗಿ ಬೇರೂರುವಂತೆ ಮಾಡಿದ ಕಲೆಯಿದು. ಅದರಲ್ಲೂ ಯಕ್ಷಗಾನ ತಾಳಮದ್ದಳೆಯೆಂಬುದು ಬಹುಶಃ ವಿಶ್ವದಾಖಲೆಯಲ್ಲಿ ಸೇರಿಕೊಳ್ಳಬೇಕಾದ ಕಲಾಪ್ರಕಾರ ಎಂದು ಕೃ.ಶಾ.ಮರ್ಕಂಜ ಬಣ್ಣಿಸಿದರು.

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ

You cannot copy content of this page - Copyright -The Rural Mirror