ಸುಳ್ಯ: ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ನಡೆದ 48 ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ -ಸುಳ್ಯ ದಸರಾದ ಸಮಾರೋಪದ ಅಂಗವಾಗಿ ಸುಳ್ಯದಲ್ಲಿ ವೈಭವದ ಶೋಭಾಯಾತ್ರೆ ನಡೆಯಿತು.
ವಿಶೇಷವಾಗಿ ಅಲಂಕರಿಸಿದ ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಮಂಟಪದಲ್ಲಿ ಕುಳ್ಳಿರಿಸಿದ ಶ್ರೀದೇವಿಯ ವಿಗ್ರಹ ಶೋಭಾಯಾತ್ರೆಯ ಮುಂಭಾಗದಲ್ಲಿ ಸಾಗಿ ಬಂತು.
ಶೋಭಾಯತ್ರೆಯು ಶ್ರೀ ಶಾರದಾಂಬಾ ಕಲಾ ವೇದಿಕೆಯಿಂದ ಹೊರಟು ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿತು. ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶೋಭಾಯಾತ್ರೆ ವೀಕ್ಷಿಸಿದರು. ಶೋಭಾಯಾತ್ರೆಯಲ್ಲಿ ಮೈಮನ ರೋಮಾಂಚನಗೊಳಿಸುವ ಸ್ತಬ್ಧಚಿತ್ರಗಳು, ಕಿವಿಗಪ್ಪಳಿಸುವ ನಾಸಿಕ್ ಬ್ಯಾಂಡ್‌ನ ಅಬ್ಬರ, ವಿಶೇಷ ಸಿಡಿಮದ್ದು ಪ್ರದರ್ಶನ, ಪಿಲಿನಲಿಕೆ ಹಾಗೂ ಇನ್ನಿತರ ಹತ್ತು ಹಲವು ಆಕರ್ಷಣೆಗಳೊಂದಿಗೆ ಶ್ರೀದೇವಿಯ ಅದ್ಧೂರಿ ಶೋಭಾಯಾತ್ರೆ ಭಕ್ತರ ಕಣ್ಮನ ತಣಿಸಿತು. ಸಾವಿರಾರು ಮಂದಿ ಶೋಭಾಯಾತ್ರೆಯ ಜೊತೆ ಹೆಜ್ಜೆ ಹಾಕಿದರು.
9 ದಿನಗಳಿಂದ ಭಕ್ತಿಯಿಂದ ಪೂಜಿಸಲ್ಪಟ್ಟ ಶ್ರೀದೇವಿಗೆ ಭಾನುವಾರ ಮಧ್ಯಾಹ್ನ ಮಹಾಪೂಜೆ ನಡೆದು ಸಂಜೆ ವೈಭವದ ಶೋಭಾಯಾತ್ರೆ ಆರಂಭಗೊಂಡಿತು. ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶಾರದಬಾ ವೇದಿಕೆಯಿಂದ ಹೊರಟ ಶೋಭಾಯಾತ್ರೆಗೆ ಶಾಸಕ ಎಸ್.ಅಂಗಾರ ಚಾಲನೆ ನೀಡಿದರು.ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲದಾಸ್,ಅಧ್ಯಕ್ಷ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ, ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಕೆ.ರಾಜು ಪಂಡಿತ್, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಬೆಂಗಳೂರು ಪದಾಧಿಕಾರಿಗಳಾದ ಯಂ.ಕೆ. ಸತೀಶ್, ರಾಜೇಶ್ ಕುರುಂಜಿಗುಡ್ಡೆ, ತೀರ್ಥರಾಮ ಜಾಲ್ಸೂರು, ದೇವಿಪ್ರಸಾದ್, ಕೆ.ಪುರುಷೋತ್ತಮ, ಜನಾರ್ದನ ದೋಳ, ವಿಜಯ ಪಾತಿಕಲ್ಲು, ಅನಿಲ್ ಕುಮಾರ್ ಕೆ.ಸಿ., ನಾರಾಯಣ ಕೆ.ಎಸ್., ಕುಸುಮಾಧರ ರೈ ಬೂಡು, ಕೆ. ಉದಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.