ಸುಳ್ಯ ನಗರ ಪಂಚಾಯತ್ ಚುನಾವಣೆಗೆ ಕ್ಷಣಗಣನೆ : ಗೆಲುವಿನ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು

May 28, 2019
8:30 PM

* ಸ್ಪೆಷಲ್ ಕರೆಸ್ಪಾಂಡೆಂಟ್ ಸುಳ್ಯನ್ಯೂಸ್.ಕಾಂ.

Advertisement
Advertisement

ಸುಳ್ಯ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರ ಮತದಾನ ಮಾಡಲು ಬೂತ್‍ನೆಡೆಗೆ ತೆರಳು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಸುಳ್ಯ ನ.ಪಂ.ನಲ್ಲಿ ಮತಗಳನ್ನು ಬುಟ್ಟಿಗೆ ಹಾಕಿಸಿಕೊಳ್ಳಲು ರಾಜಕೀಯ ಪಕ್ಷಗಳು ಮಂಗಳವಾರ ಅಂತಿಮ ಕಸರತ್ತನ್ನು ನಡೆಸಿದರು.

ಸುಳ್ಯದಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರ ಹಿಡಿಯುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದು ಎರಡೂ ಪಕ್ಷಗಳ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಳೆದ 15 ವರ್ಷಗಳ ಕಾಲ ಸುಳ್ಯ ನಗರ ಪಂಚಾಯತ್ ಅಧಿಕಾರ ನಡೆಸಿದ ಬಿಜೆಪಿಯೆಡೆಗೆ ಮತ್ತೊಮ್ಮೆ ಮತದಾರ ಒಲವು ತೋರುತ್ತಾರಾ ಅಥವಾ 15 ವರ್ಷಗಳ ದೀರ್ಘ ವಿರಾಮದ ಬಳಿಕ ಮತ್ತೆ ಕಾಂಗ್ರೆಸ್‍ಗೆ ನಗರಾಡಳಿತದ ಚುಕ್ಕಾಣಿಯನ್ನು ನೀಡುತ್ತಾರಾ ಎಂಬುದಷ್ಟೇ ಇನ್ನು ಉಳಿದಿರುವ ಕುತೂಹಲ.

ನಾಲ್ಕನೇ ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿ ಬಿಜೆಪಿ ಬೀಗುತ್ತಿದ್ದರೆ, ಒಂದೂವರೆ ದಶಕದ ಬಳಿಕ ಮತ್ತೆ ಅಧಿಕಾರ ಪಡೆಯುವ ತವಕದಲ್ಲಿ ಕಾಂಗ್ರೆಸ್ ಇದೆ. ತಮ್ಮ ಅಸ್ತಿತ್ವವನ್ನು ತೋರ್ಪಡಿಸುವ ಹರಸಾಹಸದಲ್ಲಿ ಉಳಿದ ಪಕ್ಷಗಳು. ಪಕ್ಷೇತರರು ಕಣದಲ್ಲಿದ್ದಾರೆ. 6,928 ಪುರುಷರು ಮತ್ತು 7,165 ಮಹಿಳಾ ಮತದಾರು ಸೇರಿ 14,093 ಮಂದಿ ಮತದಾರರು 53 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುವರು.

ಎರಡು ವಾರ್ಡ್‍ಗಳು ಹೆಚ್ಚಳವಾಗಿ 20 ವಾರ್ಡ್‍ಗಳ ಸುಳ್ಯ ನಗರ ಪಂಚಾಯತ್ ನಲ್ಲಿ 53 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 20 ವಾರ್ಡ್‍ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಜೆಡಿಎಸ್ ಪಕ್ಷದ ಒಬ್ಬ ಅಭ್ಯರ್ಥಿ ಎಸ್‍ಡಿಪಿಐ ಎರಡು ಮತ್ತು ಪಕ್ಷೇತರರಾಗಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನಕ್ಕಾಗಿ ಎಲ್ಲಾ ಸಿದ್ಧತೆಗಳೂ ಪೂರ್ತಿಯಾಗಿದ್ದು 20 ಬೂತ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಆಯೋಗದ ಹದ್ದಿನ ಕಣ್ಣು ಎಲ್ಲೆಡೆ ಜಾಗೃತವಾಗಿದ್ದು ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

`ವಾರ್ಡ್ ವಾರ್’

ಸುಳ್ಯದ 20 ವಾರ್ಡ್‍ಗಳಲ್ಲಿ ಬಹುತೇಕ ವಾರ್ಡ್‍ಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುತ್ತಿದೆ. ಬಹುತೇಕ ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಸ್ಫರ್ಧೆ ನಡೆಯುತ್ತಿದ್ದರೆ ಕೆಲವು ವಾರ್ಡ್‍ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಅತ್ಯಂತ ಬಿರುಸಿನ ಮತ್ತು ಮೈನವಿರೇಳಿಸುವ ಸ್ಪರ್ಧೆ ನಡೆಯುವುದು 17ನೇ ವಾರ್ಡ್ ಬೋರುಗುಡ್ಡೆಯಲ್ಲಿ.ಇಲ್ಲಿ ಮಾಜಿ ಸದಸ್ಯ ಕಾಂಗ್ರೆಸ್‍ನ ಕೆ.ಎಂ.ಮುಸ್ತಫಾ, ಕಾಂಗ್ರೆಸ್ ಬಂಡಾಯವಾಗಿ ಸ್ಪರ್ಧಿಸುವ ಪಕ್ಷೇತರ ಅಭ್ಯರ್ಥಿ ಆರ್.ಕೆ.ಮಹಮ್ಮದ್, ಕಳೆದ ಬಾರಿಯ ಎಸ್‍ಡಿಪಿಐ ಸದಸ್ಯ ಈ ಬಾರಿ ಪಕ್ಷೇತರನಾಗಿ ಸ್ಪರ್ಧಿಸುವ ಕೆ.ಎಸ್.ಉಮ್ಮರ್ ಮಧ್ಯೆ ತ್ರಿಕೋನ ಸ್ಪರ್ಧೆ ನಡೆಯುತಿದೆ. ಈ ತ್ರಿಕೋನ ಸ್ಪರ್ಧೆಯ ಲಾಭ ಪಡೆದು ಗೆಲುವಿನ ದಡ ಸೇರಲು ಬಿಜೆಪಿ ಅಭ್ಯರ್ಥಿ ರಂಜಿತ್ ಪೂಜಾರಿ ಪ್ರಯತ್ನಿಸುವಾಗ ಇಲ್ಲಿ ಚತುಷ್ಕೋನ ಸ್ಪರ್ಧೆಯ ರಂಗು ತಂದಿದೆ.

ಇನ್ನೊಂದು ಪ್ರತಿಷ್ಠೆಯ ಕಣ 13ನೇ ವಾರ್ಡ್ ಬೂಡು. ಇಲ್ಲಿ ಬಿಜೆಪಿಯ ಬೂಡು ರಾಧಾಕೃಷ್ಣ ರೈ ಮತ್ತು ಕಾಂಗ್ರೆಸ್‍ನ ಕೆ.ಗೋಕುಲ್‍ದಾಸ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದ್ದರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಸೀಟ್ ಸಿಗದ ಹಿನ್ನಲೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವ ರಿಯಾಝ್ ಕಟ್ಟೆಕ್ಕಾರ್ ಸ್ಪರ್ಧೆಯಿಂದ ಇಲ್ಲಿ ಪೋಟೋ ಫಿನೀಶ್ ಫಲಿತಾಂಶದ ರಂಗು ತಂದಿದೆ.

ಇನ್ನೊಂದು ಕಣ 10ನೇ ವಾರ್ಡ್ ಕೇರ್ಪಳ-ಪುರಭವನದಲ್ಲಿ ಇಲ್ಲಿ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಸ್.ಎಂ.ಉಮ್ಮರ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಆಕಾಂಕ್ಷಿಗಳು ಹೆಚ್ಚು ಇದ್ದ ಕಾರಣ ಸೀಟ್ ಸಿಗದವರಿಂದ ಭುಗಿಲೆದ್ದ ಅಸಮಾಧಾನ ಈ ವಾರ್ಡನ್ನು ಕುತೂಹಲದ ಕೇಂದ್ರವಾಗಿಸಿದೆ.

Advertisement

ಮಹಿಳಾ ಸ್ಪರ್ಧೆ ನಡೆಯುವ 19ನೇ ವಾರ್ಡ್ ಮಿಲಿಟ್ರಿ ಗ್ರೌಂಡ್‍ನಲ್ಲಿಯೂ ಹೈವೋಲ್ಟೇಜ್ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ ಬಿಜೆಪಿಯ ಶಿಲ್ಪಾ ಸುದೇವ್ ಮತ್ತು ಕಾಂಗ್ರೆಸ್‍ನ ಜೂಲಿಯಾ ಕ್ರಾಸ್ತಾ ಮಧ್ಯೆ ಸ್ಪರ್ಧೆ ಆದರೂ ಬಿಜೆಪಿ ಬಂಡಾಯ ಅಭ್ಯರ್ಥಿ ಮೋಹಿನಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವುದು ಕುತೂಹಲ ಮೂಡಿಸಿದೆ.

ಅಭ್ಯರ್ಥಿ ಆಯ್ಕೆಯ ಸಂದರ್ಭದ ಅಸಮಾಧಾನ, ಬಂಡಾಯ ಸ್ಪರ್ಧೆಗಳು ಮೂರನೇ ವಾರ್ಡ್ ಜಯನಗರ, ನಾಲ್ಕನೇ ವಾರ್ಡ್ ಶಾಂತಿನಗರ, ಆರನೇ ವಾರ್ಡ್ ಬೀರಮಂಗಲ, 20ನೇ ವಾರ್ಡ್ ಕಾನತ್ತಿಲಗಳಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂಡಿಸಿದೆ. 15ನೇ ವಾರ್ಡ್ ನಾವೂರು, 14ನೇ ವಾರ್ಡ್ ಕಲ್ಲುಮುಟ್ಲು ವಾರ್ಡ್‍ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಉಳಿದ ವಾರ್ಡ್‍ಗಳಲ್ಲಿ ನೇರ ಸ್ಪರ್ಧೆ ನಡೆಯುತಿದೆ.

ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳಿಗಿಂತ ಮನೆ ಮನೆ ಪ್ರಚಾರಕ್ಕೆ ಎಲ್ಲಾ ಪಕ್ಷಗಳು ಹೆಚ್ಚು ಒತ್ತು ನೀಡಿದ್ದವು. ಮೂರು-ನಾಲ್ಕು ಹಂತದಲ್ಲಿ ಮನೆ ಮನೆ ಬೇಟಿ ನೀಡಿ ಮತದಾರರನ್ನು ಮುಖತಃ ಬೇಟಿಯಾಗಿ ಓಲೈಕೆ ಮಾಡುವ ಚುನಾವಣಾ ಪ್ರಚಾರವನ್ನು ಎಲ್ಲಾ ಪಕ್ಷದವರೂ ಮಾಡಿದ್ದರು. ಬಹಿರಂಗ ಪ್ರಚಾರ ಸಭೆ, ಪ್ಲೆಕ್ಸ್, ಬ್ಯಾನರ್ ಪ್ರಚಾರ, ಮೈಕಾಸುರನ ಅಬ್ಬರ ಎಲ್ಲೂ ಕಂಡು ಬರಲಿಲ್ಲ. ಸುಮಾರು 15 ದಿನಗಳ ಕಾಲ ನಡೆದ ನಿಶ್ಯಬ್ದ ಪ್ರಚಾರ ಬಳಿಕ ಈಗ ಪಕ್ಷದವರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 18-05-2025 | ಮೇ.19 ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸೂಚನೆ | ನಿರೀಕ್ಷೆಗೂ ಮುನ್ನವೇ ಮುಂಗಾರು ನಿರೀಕ್ಷೆ |
May 18, 2025
2:42 PM
by: ಸಾಯಿಶೇಖರ್ ಕರಿಕಳ
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ | ಈ ವರ್ಷ ಅದೃಷ್ಟವೋ ಅದೃಷ್ಟ!
May 18, 2025
10:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆ ಉದ್ದಿಮೆ-ಮಾರುಕಟ್ಟೆ ಮತ್ತು ಪರಿಣಾಮ
May 18, 2025
8:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group