ಸುಳ್ಯ: ಸತತ ಆರು ಬಾರಿ ಸುಳ್ಯ ಕ್ಷೇತ್ರದಿಂದ ಆರಿಸಿ ಬಂದರೂ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲು ಸುಳ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜನಪ್ರತಿನಿಧಿಗಳ ಮತ್ತು ಪಕ್ಷದ ಪ್ರಮುಖರ ಸಭೆ ಬುಧವಾರ ನಡೆಯಿತು.
ಸಭೆಯಲ್ಲಿ ಭಾಗವಹಿಸಿದವರು ಅಂಗಾರರಿಗೆ ಸಚಿವ ಸ್ಥಾನ ಸಿಗದಕ್ಕೆ ಬಿಜೆಪಿಯ ಜಿಲ್ಲೆ ಮತ್ತು ರಾಜ್ಯ ನೇತೃತ್ವದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆರು ಬಾರಿ ಶಾಸಕರಾದ ಅಂಗಾರರನ್ನು ಕಡೆಗಣಿಸಿ ಸುಳ್ಯಕ್ಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ರಾಜ್ಯ ನೇತೃತ್ವ ತೀವ್ರ ಅನ್ಯಾಯ ಮಾಡಿದೆ ಎಂದು ಕೆಲವರು ಹೇಳಿದರು. ಜಿಲ್ಲೆಯಲ್ಲಿ ಏಳು ಮಂದಿ ಶಾಸಕರಿದ್ದರೂ ಅವರಲ್ಲಿ ಹಿರಿಯರಾದ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಕೊಡಿಸಲು ಜಿಲ್ಲಾ ಬಿಜೆಪಿ ನೇತೃತ್ವ ಪ್ರಯತ್ನ ನಡೆಸಿಲ್ಲ ಎಂಬ ಆಕ್ರೋಶವೂ ಕೇಳಿ ಬಂತು. ಶಾಸಕ ಅಂಗಾರರಿಗೆ ಸಚಿವ ಸ್ಥಾನ ಸಿಗದ ಬಗ್ಗೆ ಜಿಲ್ಲೆಯ ನಾಯಕರು ಮತ್ತು ಇತರ ಶಾಸಕರು ಧ್ವನಿ ಎತ್ತದೇ ಇರುವ ಬಗ್ಗೆಯೂ ಸಭೆಯಲ್ಲಿ ಪ್ರಶ್ನಿಸಲಾಯಿತು. ಬಳಿಕ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಕ್ರೂಢೀಕರಿಸಿ ಸಚಿವ ಸ್ಥಾನ ಸಿಗುವ ತನಕ ಅಸಹಕಾರ ಚಳುವಳಿ ನಡೆಸಲು ನಿರ್ಧರಿಸಲಾಯಿತು. ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ತಮ್ಮ ಹುದ್ದೆಗೆ ರಾಜಿನಾಮೆ ಘೋಷಿಸಿ ಅಧ್ಯಕ್ಷರಿಗೆ ರಾಜಿನಾಮೆ ಪತ್ರ ಸಲ್ಲಿಸಿದರು.