ಸುಳ್ಯ : ಈ ಹಿಂದೆ ಸ್ವಾತಂತ್ರ ಸಮರಕ್ಕೆ ಧುಮುಕಲು ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಸಾಮೂಹಿಕ ಗಣೇಶೋತ್ಸವವನ್ನು ಆಚರಣೆಗೆ ತಂದರು. ಇದೀಗ ಸಾರ್ವತ್ರಿಕವಾಗಿ ಸಾರ್ವಜನಿಕ ಆಚರಣೆಗಳು ಅಲ್ಲಲ್ಲಿ ನಡೆಯುತ್ತಿದ್ದು, ಮತ್ತೆ ದೇಶ ಬಲಿಷ್ಠಗೊಳ್ಳಲು ಇದು ಸಹಕಾರಿ ಎಂದು ಶಾಸಕ ಎಸ್.ಅಂಗಾರ ತಿಳಿಸಿದರು.
ಅವರು ಸುಳ್ಯದ ಶ್ರೀಸಿದ್ಧಿ ವಿನಾಯಕ ಸೇವಾ ಸಮಿತಿ ಮತ್ತು ಸಾರ್ವಜನಿಕ ಶ್ರೀದೇವತಾರಾಧನಾ ಸಮಿತಿ ವತಿಯಿಂದ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಶ್ರೀಗಣೇಶೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ.ಚಿದಾನಂದ ನೂತನ ಗಣೇಶ ಗುಡಿ ನಿರ್ಮಾಣ ಕಾರ್ಯ ಆದಷ್ಟು ಬೇಗ ಕೈಗೂಡಲಿ ಎಂದರು.
ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾ„ಕಾರಿ ಡಾ|ಭಾನುಮತಿ ವಿ. ಶುಭ ಹಾರೈಸಿದರು. ಗೌರವಾಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಪೂರ್ವಾಧ್ಯಕ್ಷ ಕೆ.ಎಸ್.ಗೋಪಾಲಕೃಷ್ಣ, ಅಧ್ಯಕ್ಷ ಎಸ್.ಗುರುದತ್ ಶೇಟ್, ಪಿ.ಕೆ.ಉಮೇಶ್, ಡಾ|ಲೀಲಾಧರ್ ಡಿ.ವಿ. ಉಪಸ್ಥಿತರಿದ್ದರು.
ಡಿ.ಟಿ.ದಯಾನಂದ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶಶಿಧರ ಎಂ.ಜೆ. ನಿರೂಪಿಸಿ, ವಂದಿಸಿದರು.