ಸುಳ್ಯ: ಶುದ್ದ ಹಸ್ತರೆಂದು ಜನಜನಿತ ಮಾನ್ಯ ಹಿರಿಯ ಶಾಸಕರಾದ ಅಂಗಾರರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡದೇ ಇರುವುದು ಅಮರ ಸುಳ್ಯದ 70 ವರ್ಷದ ಮೀಸಲು ಕ್ಷೇತ್ರದಲ್ಲಿ ಸತತವಾಗಿ 27 ವರ್ಷ ಅವಧಿಗೆ ಬೆಂಬಲಿಸಿದ ಜನತೆಗೆ, ಶೋಷಿತರಿಗೆ ಮಾಡಿದ ಅನ್ಯಾಯ ಹಾಗೂ ಅವಮಾನ. ಜನರು ಇಟ್ಟಿರುವ ಸುಧೀರ್ಘ ಅದಮ್ಯ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ ಎಂದು ಆಮ್ ಆದ್ಮಿ ಪಕ್ಷ ,ಯುವ ಘಟಕ (AYW) ಮತ್ತು ವಿದ್ಯಾರ್ಥಿ ಘಟಕ (CYSS)ದ ರಾಜ್ಯ ಸಮಿತಿ ಸದಸ್ಯ ಅಶೋಕ ಎಡಮಲೆ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಸ್ಥಾನ ಸುಳ್ಯದ ಜನತೆಯ ಪಕ್ಷಾತೀತ ಒಕ್ಕೊರಲ ಆಗ್ರಹವು ಆಗಿತ್ತು.ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದು. ವಿರೋಧಿ ಪಕ್ಷಗಳ ಸರಕಾರಗಳು ನಿರ್ಲಕ್ಷ್ಯ ಮಾಡಿರುವ ಸಹಜ ರಾಜಕೀಯ ಪರಿಸ್ಥಿತಿಯು ಕಾರಣವಾಗಿತ್ತು . ಇಂತಹ ಸಂದರ್ಭಗಳಲ್ಲಿ ತನ್ನದೆ ಪಕ್ಷದ ಸರಕಾರದಿಂದ ಸಚಿವರಾಗಿ, ಸುಳ್ಯ ನಗರವನ್ನು ಪುರಸಭೆ ಪರಿವರ್ತನೆ, ಇಲ್ಲಿನ ಶಾಶ್ವತ ಕುಡಿಯುವ ನೀರಿನ ಯೋಜನೆ, ಪಯಸ್ವಿನಿ ಹೊಳೆಗೆ ಕಿಂಡಿ ಅಣೆಕಟ್ಟು, ಯೋಜಿತ ರಬ್ಬರ್ ಕಾರ್ಖಾನೆ ಚಾಲನೆ, ಇಲ್ಲಿನ ಪ್ರಾಕೃತಿಕ ಪರಿಸರದ ಹದಗೆಟ್ಟ ಗ್ರಾಮೀಣ ರಸ್ತೆಗೆ ಕಾಯಕಲ್ಪ, ನೂತನ ಕಡಬ ತಾಲೂಕಿಗೆ ಪ್ರಾಶಸ್ತ್ಯ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಮತ್ತಷ್ಟು ಅನುದಾನ, ಕೃಷಿ ಪ್ರಧಾನ ಆಧಾರಿತ ಕೈಗಾರಿಕೆ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ ಅಭಿವೃದ್ಧಿ , ಹಾಲಿ ಸರಕಾರಿ ಶಿಕ್ಷಣದ ಕಾಲೇಜುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇತ್ಯಾದಿಗಳನ್ನು ಕಾರ್ಯರೂಪಕ್ಕೆ ತರಲು ಸಹಕಾರಿ ಎಂಬುದು ಜನಸಾಮಾನ್ಯರ ಅಪೇಕ್ಷೆಯಾಗಿದೆ.
ಆದಾಗ್ಯೂ ಎರಡನೇ ಹಂತದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನ ದೊರೆತು ಸುಳ್ಯ, ಕಡಬದ ಜೊತೆಗೆ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಸುಳ್ಯದ ಶಾಸಕರು ಗೌರವಕ್ಕೆ ಪಾತ್ರರಾಗಲಿ ಎಂಬುದಾಗಿ ಪಕ್ಷಾತೀತವಾಗಿ ಜನತೆ ಬಯಸಿದ್ದಾರೆ.