ಸುಳ್ಯ: ಕಳೆದ 26 ವರ್ಷಗಳಿಂದ ಸುಳ್ಯ ಶಾಸಕರಾಗಿ ಕೆಲಸ ಮಾಡುತ್ತಿದ್ದ ಎಸ್.ಅಂಗಾರ ಅವರು ಇನ್ನು ಸಚಿವ ಎಸ್.ಅಂಗಾರ..? ಈ ದಿನಗಳು ಹತ್ತಿರ ಬಂದಿವೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಗೆದ್ದುಕೊಂಡಿತ್ತು. ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಎಂದೂ ಎಲ್.ಕೆ.ಅಡ್ವಾಣಿ ಅವರಿಂದಲೂ ಹೇಳಿಸಿಕೊಂಡಿರುವ ಕ್ಷೇತ್ರ. ಕಳೆದ ಬಾರಿ ಇಡೀ ಜಿಲ್ಲೆಯಲ್ಲಿ ಬಿಜೆಪಿ ಸೋತಿದ್ದರೂ ಸುಳ್ಯ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿತ್ತು. ಹಾಗಿದ್ದರೂ ಸತತ 26 ವರ್ಷಗಳಿಂದ ಶಾಸಕರಾಗಿದ್ದ ಎಸ್.ಅಂಗಾರ ಅವರಿಗೆ ಇದುವರೆಗೆ ಸಚಿವ ಸ್ಥಾನ ಲಭ್ಯವಾಗಿರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಸರಕಾರವೂ ಬಂದಿರಲಿಲ್ಲ. ಬಂದಿದ್ದರೂ ಅವಕಾಶ ಸಿಗಲಿಲ್ಲ. ಸಚಿವ ಸ್ಥಾನಕ್ಕಾಗಿ ವಿಧಾನಸಭೆಯ ಹಿರಿಯ ಶಾಸಕ ಅಂಗಾರ ಅವರು ಎಂದೂ ಲಾಬಿಯನ್ನೂ ಮಾಡಿರಲಿಲ್ಲ. ಇದೀಗ ಮತ್ತೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚನೆಯಾಗಿದೆ. ಇದುವರೆಗೆ ಸಚಿವ ಸಂಪುಟ ರಚನೆಯಾಗಿಲ್ಲ. ಇದೀಗ ಸಚಿವ ಸಂಪುಟ ಆ.17 ರ ನಂತರ ರಚನೆಯಾಗಲಿದ್ದು ಇದಕ್ಕಾಗಿ ಪಟ್ಟಿ ರಚನೆಯಾಗಿದೆ. ಇದರಲ್ಲಿ ಎಸ್.ಅಂಗಾರ ಅವರ ಹೆಸರೂ ಸೇರ್ಪಡೆಯಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಅನಾಯಾಸವಾಗಿ ಈಗಲಾದರೂ ಸುಳ್ಯ ಕ್ಷೇತ್ರಕ್ಕೊಂದು ಸಚಿವ ಸ್ಥಾನ ಲಭಿಸಬೇಕು ಎಂಬುದು ಮತದಾರರ ಒತ್ತಾಸೆ. ಇದಕ್ಕಾಗಿ ಯಾವುದೇ ಲಾಬಿ, ಒತ್ತಾಯವೂ ಅನಗತ್ಯ. ಏಕೆಂದರೆ ಸುಳ್ಯದ ಎಲ್ಲಾ ಮತದಾರರಿಗೆ , ಕಾರ್ಯಕರ್ತರಿಗೆ ಬಿಜೆಪಿ ಸಹಜವಾಗಿಯೇ ಮಾನ-ಸಮ್ಮಾನ ನೀಡಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ 26 ವರ್ಷಗಳಿಂದ ಶಾಸಕರಾಗಿರುವ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ಲಭ್ಯವಾಗಲಿದೆ ಎಂಬುದು ಮೂಲಗಳ ಸ್ಪಷ್ಟ ಅಭಿಪ್ರಾಯ.
ಇದರ ಜೊತೆಗೆ ಸುಳ್ಯದ ಬಿಜೆಪಿ ಪಕ್ಷದ ಜವಾಬ್ದಾರಿಯೂ ಹೆಚ್ಚಿದೆ. ಸುಳ್ಯದಲ್ಲಿ ಕಳೆದ ಅನೇಕ ವರ್ಷಗಳಿಂದ ಮೂಲಭೂತವಾದ ಹಲವಾರು ಬೇಡಿಕೆಗಳು ಇವೆ. ಇವೆಲ್ಲವೂ ಇನ್ನು ಹೆಚ್ಚು ಜೀವಪಡೆಯುವುದು, ಹೀಗಾಗಿ ಅನುದಾನಗಳೂ ಹೆಚ್ಚು ಲಭ್ಯವಾಗುವಂತೆ ಮಾಡಬೇಕು ಎಂಬುದರ ಬಗ್ಗೆಯೂ ಸ್ಪಷ್ಟವಾದ ಸೂಚನೆ ನೀಡಲಾಗಿದೆ ಎಂದೂ ಮೂಲಗಳು ತಿಳಿಸಿವೆ.