ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಡಾ.ಚಂದ್ರಶೇಖರ ದಾಮ್ಲೆ ಅವರ ನೇತೃತ್ವದಲ್ಲಿ ಜಲಾಭಿಯಾನ ಮುಂದುವರಿದಿದೆ. ಈ ಹಿಂದೊಮ್ಮೆ ಈ ಅಭಿಯಾನದ ಪ್ರಗತಿ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದೀಗ ಸುಳ್ಯ ತಾಲೂಕಿನ 28 ಶಾಲೆಗಳಲ್ಲಿ ಅಭಿಯಾನ ನಡೆದಿದೆ. ಸುಮಾರು 5000 ವಿದ್ಯಾರ್ಥಿಗಳಿಗೆ ಜಲದ ಅರಿವು ಮೂಡಿಸಲಾಗಿದೆ. ಈ ಮೂಲಕ ತಾಲೂಕಿನಲ್ಲಿ ಕನಿಷ್ಠ 5000 ಇಂಗುಗುಂಡಿ ರಚನೆಯಾಗಬೇಕು. ಈಗ ಶಾಲೆಯ ಅಧ್ಯಾಪಕರು ಹಾಗೂ ಮುಖ್ಯಶಿಕ್ಷಕರ ಫಾಲೋಅಪ್ ಅಗತ್ಯವಾಗಿ ಇರಬೇಕಾದ್ದು. ಸಾಮಾಜಿಕ ಬದ್ಧತೆ ಹಾಗೂ ಕಾಳಜಿಯಿಂದ ಇಂತಹದ್ದೊಂದು ಪ್ರಯತ್ನ ಇರುತ್ತದೆ ಎಂಬ ನೆಲೆಯಲ್ಲಿ ಇಂದಿನ ಫೋಕಸ್…..
ಮನೆಮನೆ ಇಂಗುಗುಂಡಿ ಅಭಿಯಾನ…!.
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ನೇತೃತ್ವದಲ್ಲಿ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಸುಳ್ಯ ತಾಲೂಕಿನಲ್ಲಿ ಜಲಾಮೃತ ಎಂಬ ಹೆಸರಿನಲ್ಲಿ ಜಲಸಂರಕ್ಷಣೆಗಾಗಿ ಮನೆಮನೆ ಇಂಗುಗುಂಡಿ ಅಭಿಯಾನ ನಡೆಯುತ್ತಿದೆ. ಜಲಸಂರಕ್ಷಣೆಯೇ ಇಂದಿನ ಅನಿವಾರ್ಯತೆಯಾದ್ದರಿಂದ ಈ ಅಭಿಯಾನಕ್ಕೆ ಸಾಮಾಜಿಕ ಬದ್ಧತೆ ಎಲ್ಲರಿಗೂ ಇದೆ.
ಅಭಿಯಾನದ ಆರಂಭಕ್ಕೂ ಮುನ್ನ ಸುಳ್ಯದ ಸ್ನೇಹ ಶಾಲೆಯಲ್ಲಿ 2x2x2 ಅಡಿಗಳ ಇಂಗು ಗುಂಡಿಯನ್ನು ಮಾಡಲು ಹೇಳಲಾಗಿತ್ತು. ಅಷ್ಟು ಸಣ್ಣ ಗುಂಡಿಯಿಂದ ಏನಾಗ್ತದೆ ಎಂದು ಕೆಲವರು ತಾತ್ಸಾರ ವ್ಯಕ್ತಪಡಿಸಿದರು, ಈ ಸಂದರ್ಭ ಡಾ.ಚಂದ್ರಶೇಖರ ದಾಮ್ಲೆ ಲೆಕ್ಕ ಹೇಳಿದ್ದು ಹೀಗೆ,
ಗುಂಡಿ ಸಣ್ಣದೆಂದು ಕಂಡರೂ ಒಮ್ಮೆ ತುಂಬಿದಾಗ 8 ಘನ ಅಡಿಯ ಅದರಲ್ಲಿ ಸುಮಾರು 250 ಲೀಟರ್ ನೀರು ತುಂಬುತ್ತದೆ. ಅದು ಇಂಗುತ್ತದೆ, ಮತ್ತು ತುಂಬುತ್ತದೆ. ಹೀಗೆ ನೂರು ಬಾರಿ ತುಂಬುವುದು ಇಂಗುವುದು ಆದಾಗ 25,000 ಲೀಟರ್ ನೀರು ಭೂಮಿಯಲ್ಲಿ ಇಂಗಿದಂತಾಗುತ್ತದೆ.ಇದೇನು ಸಣ್ಣ ಸಂಗ್ರಹವೇ ಎಂದಾಗ ಮಕ್ಕಳಿಗೆ ಇಂಗು ಗುಂಡಿಯ ಸಾಮರ್ಥ್ಯದ ಅರಿವಾಗುತ್ತದೆ. ಈಗ ವಿದ್ಯಾರ್ಥಿಗಳಿಗೆ ಇನ್ನೂ ಸುಲಭದ ಗುಂಡಿ ಮಾಡಲು ಹೇಳಲಾಗುತ್ತದೆ. ಅಂದರೆ ಒಂದು ಮೀಟರ್ ಉದ್ದಗಲದ ಮತ್ತು ಒಂದು ಅಡಿ ಆಳದ ಹೊಂಡ ಮಾಡಲೂ ಸುಲಭ, ಅಪಾಯವೂ ಕಡಿಮೆ. ಇಂತಹ ಗುಂಡಿ ಒಮ್ಮೆ ತುಂಬಿದಾಗ 300 ಲೀಟರ್ ಆಗುತ್ತದೆ. ಅದು ಈ ವರ್ಷ ನೂರು ಬಾರಿ ತುಂಬಿದರೂ 30,000 ಲೀಟರ್ ನೀರನ್ನು ಭೂಮಿಯಲ್ಲಿ ಸಂಗ್ರಹಿಸಲು ಸಾಧ್ಯ. ಇದಲ್ಲದೆ ವಿದ್ಯಾರ್ಥಿಗಳಿಗೆ ತಾವು ಮಾಡಿದ ಇಂಗು ಗುಂಡಿಯ ಬಳಿ ತಮ್ಮ ಹುಟ್ಟು ಹಬ್ಬದ ದಿನ ಒಂದು ಹಣ್ಣಿನ ಗಿಡವನ್ನೂ ನೆಡುವಂತೆ ಸಲಹೆ ನೀಡಲಾಗಿದೆ.
ಅಭಿಯಾನ ಆರಂಭವಾದ ಬಳಿಕ ಇದುವರೆಗೆ ಒಟ್ಟು 23 ಪ್ರೌಢಶಾಲೆಗಳಲ್ಲಿ ಹಾಗೂ 5 ಪ್ರಾಥಮಿಕ ಶಾಲೆಗಳಲ್ಲಿ “ಮನೆ ಮನೆಯಲ್ಲಿ ಇಂಗು ಗುಂಡಿ“ ಅಭಿಯಾನ ಕಾರ್ಯಕ್ರಮ ನಡೆದಿದೆ. ಸುಮಾರು 5000 ವಿದ್ಯಾರ್ಥಿಗಳಿಗೆ ನೀರಿಂಗಿಸುವ ಮಹತ್ವ, ಅದರ ಅಗತ್ಯ ಮತ್ತು ವಿಧಾನಗಳನ್ನು ತಿಳಿಸಲಾಗಿದೆ. ಸಂಭಾಷಣಾ ರೂಪದಲ್ಲಿ ಮಾಹಿತಿ ನೀಡಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಮನದಟ್ಟಾಗಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಇಂಗು ಗುಂಡಿ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ಪ್ರತಿಷ್ಞೆ ಸಾಕಾರಗೊಳ್ಳು ಆಯಾ ಶಾಲೆಯ ಅಧ್ಯಾಪಕರು ಹಾಗೂ ಮುಖ್ಯಶಿಕ್ಷಕರ ಬದ್ಧತೆ ಹಾಗೂ ಸಾಮಾಜಿಕ ಹಿತದೃಷ್ಠಿಯ ಮೇಲೆ ಇದೆ. ಮಕ್ಕಳನ್ನು ಯಾವ ರೀತಿಯಲ್ಲಿ ಪ್ರೇರೇಪಣೆ ಮಾಡುತ್ತಾರೆ ಎಂಬುದರ ಮೇಲೆ ಇಂಗುಗುಂಡಿ ರಚನೆಯಾಗಬಹುದು.
ಈಗಾಗಲೇ ಸುಳ್ಯದ ಸ್ನೇಹ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಇಂಗು ಗುಂಡಿಗಳನ್ನು ರಚನೆ ಮಾಡಿದ್ದಾರೆ. ಇದಕ್ಕಾಗಿ ಇಂಗುಗುಂಡಿ ಜೊತೆ ಫೋಟೊ ತೆಗೆದು ಬ್ಯಾನರ್ ರೂಪದಲ್ಲಿ ಪ್ರಕಟ ಮಾಡಿದ್ದಾರೆ. ಇದರ ಜೊತೆಗೆ ಸದ್ಯ ಅರಂತೋಡು, ಕುಮಾರಸ್ವಾಮಿ, ತೆಕ್ಕಿಲ್ ಶಾಲೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಇಂಗುಗುಂಡಿ ರಚನೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಇನ್ನುಳಿದ ಶಾಲೆಗಳಲ್ಲೂ ಕೆಲವು ವಿದ್ಯಾರ್ಥಿಗಳು ಮಾಡಿದ್ದಾರೆ. ಇದೇ ಮಾದರಿಯ ಪ್ರಯತ್ನ ಹಾಗೂ ಸ್ವಲ್ಪ ಮಟ್ಟಿನ ಆಸಕ್ತಿ ವಹಿಸಿದರೆ ಎಲ್ಲಾ ಇನ್ನಷ್ಟು ಯಶಸ್ಸು ಕಾಣಲು ಸಾಧ್ಯವಾಗಿದೆ.
ಕಳೆದ ಎರಡು ದಿನದಲ್ಲಿ ಬೆಳ್ಳಾರೆಯ ಜ್ಞಾನಗಂಗಾ ಪ್ರೌಢಶಾಲೆಯಲ್ಲಿ ಸುಮಾರು 250 ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಇಂಗು ಗುಂಡಿ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಸುಮಾರು 320 ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಇಂಗು ಗುಂಡಿ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲೆಯಲ್ಲಿ ಸುಮಾರು 210 ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಇಂಗು ಗುಂಡಿ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ದುಗ್ಗಲಡ್ಕದ ಸರಕಾರಿ ಪ್ರೌಢಶಾಲೆಯಲ್ಲಿ ” ಮನೆ ಮನೆಯಲ್ಲಿ ಇಂಗು ಗುಂಡಿ ಅಭಿಯಾನ ” ಜರಗಿತು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದವರು ಪೂರ್ಣ ಸಹಕಾರ ನೀಡಿದ್ದಲ್ಲದೆ ವಿದ್ಯಾರ್ಥಿಗಳು ಇಂಗು ಗುಂಡಿ ಮಾಡಲು ಉತ್ಸಾಹದಿಂದ ಪ್ರತಿಜ್ಞೆ ಮಾಡಿದ್ದಾರೆ. ಮಿತ್ತಡ್ಕದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಐದನೇಯಿಂದ ಏಳನೇ ತರಗತಿ ವರೆಗಿನ 40 ವಿದ್ಯಾರ್ಥಿಗಳು ಇಂಗು ಗುಂಡಿ ಮಾಡಲು ಉತ್ಸಾಹದಿಂದ ಪ್ರತಿಜ್ಞೆ ಮಾಡಿದ್ದಾರೆ.
ಜಲಸಂರಕ್ಷಣೆಯ ನಿಟ್ಟಿನಲ್ಲಿ ಅಭಿಯಾನ ಮುಂದುವರಿಯಲಿ, ಜೊತೆಗೆ ಶಾಲೆಗಳಲ್ಲಿ ಶಿಕ್ಷಕರ, ಮುಖ್ಯಶಿಕ್ಷಕರ ಉತ್ಸಾಹವೂ ಅಷ್ಟೇ ಇರಲಿ, ಕನಿಷ್ಠ ಶಾಲಾ ಅಸೆಂಬ್ಲಿಯಲ್ಲಿ ದಿನವೂ ಜಲಸಂರಕ್ಷಣೆಯ ಬಗ್ಗೆ ಒಂದು ವಾಕ್ಯ ಇರಲಿ ಎಂಬ ಸದಾಶಯ ಸುಳ್ಯನ್ಯೂಸ್.ಕಾಂ ವ್ಯಕ್ತಪಡಿಸುತ್ತದೆ.