ಸುಳ್ಯ: ವಿದ್ಯೆ ಕಲಿಸಿದ ಗುರುವಿಗೆ ಮೊದಲ ವಂದನೆ ಸಲ್ಲಿಸಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಸುಳ್ಯದ ಸ್ನೇಹ ಶಾಲೆ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಿದರು.
ಶಿಕ್ಷಕರ ದಿನಾಚರಣೆಯಂದು ಶಾಲೆಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಬಿಟ್ಟು ಮಾಡುವ ಆಚರಣೆಗಿಂತ ಭಿನ್ನವಾಗಿ ಸುಳ್ಯದ ಸ್ನೇಹ ಶಾಲೆಯಲ್ಲಿ ಶಿಕ್ಷಕ ವೃಂದದವರನ್ನು ಗೌರವಿಸಲಾಯಿತು. ಶಿಕ್ಷಕಿಯರನ್ನು ವೇದಿಕೆಯಲ್ಲಿ ಕೂರಿಸಿ ವಿದ್ಯಾರ್ಥಿನಿಯರು ಆರತಿ ಎತ್ತಿ, ಪುಷ್ಪ ನೀಡಿ, ಅರಸಿನ ಕುಂಕುಮ ಹಚ್ಚಿ ವಂದನೆ ಮಾಡಿದರು.ಈ ಸಂದರ್ಭದಲ್ಲಿ ಹೆತ್ತವರೂ ಭಾಗವಹಿಸಿದ್ದು ಮಾತೆಯರೂ ಮುಂದೆ ಬಂದು ಶಿಕ್ಷಕರಿಗೆ ಆರತಿ ಎತ್ತಿದರು. ಶಾಲಾ ಆಡಳಿತ ಮಂಡಳಿಯ ವತಿಯಿಂದ ಶಿಕ್ಷಕ ವೃಂದದ ಎಲ್ಲರಿಗೂ ಪುಸ್ತಕಗಳ ಉಡುಗೊರೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ಶಿಕ್ಷಕರ ದಿನಾಚರಣೆಯನ್ನು ಮಕ್ಕಳು, ಹೆತ್ತವರು ಮತ್ತು ಆಡಳಿತ ಮಂಡಳಿಯರು ಮಾಡಬೇಕೆಂಬ ತಮ್ಮ ಚಿಂತನೆಯಂತೆ ಈ ಬಾರಿ ವಿಶಿಷ್ಟವಾಗಿ ಆಚರಿಸಿದ್ದೇವೆ ಎಂದರು.
ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಗಿರೀಶ ಭಾರದ್ವಾಜ ಮಾತನಾಡಿ ಶಿಕ್ಷಕರ ಆಶೀರ್ವಾದವಿದ್ದರೆ ಯಾವುದೇ ಸಂಕೀರ್ಣ ಸಂದರ್ಭಗಳನ್ನೂ ನಿಭಾಯಿಸಲು ಸಾಧ್ಯವೆಂದು ಹೇಳಿದರು.
ಶಾಲಾ ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆ ಮಾತನಾಡಿ ಕಲಿತು ಕಲಿಸುವ ಗುರುಗಳಿಂದಷ್ಟೇ ಸೃಜನಶೀಲ ಶಿಕ್ಷಣ ನೀಡಲು ಸಾಧ್ಯ. ಅಂತಹ ಶಿಕ್ಷಣ ನೀಡುವುದೇ ನಮ್ಮ ಗುರಿ ಎಂದರು.
ಗುರುವಂದನೆ ಕಾರ್ಯಕ್ರಮಕ್ಕೆ ಮೊದಲು ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ಶಿಕ್ಷಕ-ರಕ್ಷಕರ ಸಭೆಯನ್ನು ನಡೆಸಿದರು.