ಕಡಬ: ನೂತನ ಕಡಬ ತಾಲೂಕು ಉದ್ಘಾಟನೆಯಾಗಿ ಅನುಷ್ಠಾನ ಕಾರ್ಯಗಳು ಪ್ರಗತಿಯಲ್ಲಿರುವಂತೆಯೇ ಸ್ವತಂತ್ರ ಕಡಬ ತಾಲೂಕು ಪಂಚಾಯತ್ ರಚನೆಗೆ ಸರಕಾರವು ಹಸಿರುನಿಶಾನೆ ನೀಡಿದೆ.
ರಾಜ್ಯದಲ್ಲಿ ರಚನೆಯಾಗಿರುವ 50 ಹೊಸ ತಾಲೂಕುಗಳಲ್ಲಿ ಪ್ರತ್ಯೇಕ ತಾಲೂಕು ಪಂಚಾಯತ್ ವ್ಯವಸ್ಥೆಗಾಗಿ ಪ್ರತೀ ತಾಲೂಕಿಗೆ 14 ಹುದ್ದೆಗಳಂತೆ 700 ಹುದ್ದೆಗಳನ್ನು ಸೃಷ್ಟಿಯಾಗಲಿದ್ದು, ಈ ಕುರಿತು ಜೂ. 12 ರಂದು ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಪ್ರಸ್ತುತ ಪುತ್ತೂರು ಹಾಗೂ ಸುಳ್ಯ ತಾಲೂಕು ಪಂಚಾಯತ್‍ನ ವ್ಯಾಪ್ತಿಯಲ್ಲಿರುವ ಕಡಬ ತಾಲೂಕಿಗೆ ಸೇರ್ಪಡೆಯಾಗಿರುವ ಒಟ್ಟು 42 ಗ್ರಾಮಗಳನ್ನೊಳಗೊಂಡ 13 ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಸೇರಿಸಿ ಹೊಸ ಕಡಬ ತಾಲೂಕು ಪಂಚಾಯತ್ ಕಾರ್ಯಾರಂಭಿಸಲಿದೆ. ಹೊಸ ತಾಲೂಕು ಪಂಚಾಯತ್ ಕಚೇರಿ ತೆರೆಯಲು ಲಭ್ಯವಿರುವ ಕಟ್ಟಡ, ಕಾದಿರಿಸಲಾಗಿರುವ ಜಮೀನು ಇತ್ಯಾದಿ ಮಾಹಿತಿಗಳನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದ್ದು, ಹೊಸ ವ್ಯವಸ್ಥೆಗೆ ಕ್ಷೇತ್ರಗಳನ್ನು ವಿಂಗಡಿಸುವ ಸಲುವಾಗಿ ಅಧಿಸೂಚನೆ ಪ್ರಕಟಗೊಳ್ಳಲಿದೆ.
ಕಡಬ ತಾಲೂಕು ಪಂಚಾಯತ್‍ಗೆ ಸೇರ್ಪಡೆಯಾಗಲಿರುವ ಕ್ಷೇತ್ರಗಳು:
ಪುತ್ತೂರು ತಾಲೂಕಿನ ಕಡಬ (ಕಡಬ, ಕೋಡಿಂಬಾಳ), ಕುಟ್ರುಪ್ಪಾಡಿ (ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರುಪ್ಪಾಡಿ), ಐತ್ತೂರು (ಐತ್ತೂರು, ಕೊಣಾಜೆ, ಬಂಟ್ರ, 102 ನೆಕ್ಕಿಲಾಡಿ), ಬಿಳಿನೆಲೆ (ಬಿಳಿನೆಲೆ, ಶಿರಾಡಿ, ಶಿರಿಬಾಗಿಲು, ಕೊಂಬಾರು), ಗೋಳಿತೊಟ್ಟು (ಗೋಳಿತೊಟ್ಟು, ಆಲಂತಾಯ, ಹಳೆನೇರೆಂಕಿ), ಚಾರ್ವಾಕ (ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಕಾಯಿಮಣ, ಕುದ್ಮಾರು), ಸವಣೂರು (ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಬೆಳಂದೂರು, ನೆಲ್ಯಾಡಿ (ನೆಲ್ಯಾಡಿ, ಕೊಣಾಲು), ಕೌಕ್ರಾಡಿ (ಕೌಕ್ರಾಡಿ, ಇಚ್ಲಂಪಾಡಿ, ಬಲ್ಯ), ಆಲಂಕಾರು (ಆಲಂಕಾರು, ಪೆರಾಬೆ, ಕುಂತೂರು), ರಾಮಕುಂಜ (ರಾಮಕುಂಜ, ಕೊೈಲ), ಸುಳ್ಯ ತಾಲೂಕಿನ ಸುಬ್ರಹ್ಮಣ್ಯ (ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಲ್ಪ, ಕೇನ್ಯ) ಹಾಗೂ ಎಣ್ಮೂರು (ಎಣ್ಮೂರು, ಎಡಮಂಗಲ) ಕ್ಷೇತ್ರಗಳು ನೂತನ ಕಡಬ ತಾಲೂಕು ಪಂಚಾಯತ್‍ನ ವ್ಯಾಪ್ತಿಗೆ ಬರಲಿದೆ.