ಅಂದು ಮಿಡಿದ ಪೇಸ್ ಬುಕ್ ಹೃದಯಗಳು…..

May 11, 2019
10:00 AM

ಆಗಸ್ಟ್ ತಿಂಗಳ ಎರಡನೇ ವಾರ. ಬಾನಿಗೆ ಬಾನೇ ತೂತಾದಂತೆ ಕೊಡಗಿನಲ್ಲಿ ಸುರಿಯುತ್ತಿದ್ದ ಮಳೆ ಕೆಟ್ಟದ್ದೇನೋ ಸೂಚನೆ ಕೊಡುತ್ತಿತ್ತು. ವಿಜೃಂಭಣೆಯಿಂದ ನಡೆಯಬೇಕಾಗಿದ್ದ ಸ್ವಾತಂತ್ರ್ಯ ದಿನಾಚರಣೆಗೆ ವರುಣ ಅವಕಾಶ ಕೊಡಲಿಲ್ಲ.ಎದೆಮಟ್ಟದ ನೀರಿನಲ್ಲಿ, ದೋಣಿಯಲ್ಲಿ ನಿಂತು ಧ್ವಜ ಹಾರಿಸಿದ ಸುದ್ದಿಗಳು ವರದಿಯಾದವು. ಗಾಳಿ, ಮಳೆಯ ಅಟ್ಟಹಾಸ ಮೇರೆ ಮೀರಿತು.ಮಡಿಕೇರಿ ನಗರದೊಳಗೆ ಎರಡಂತಸ್ತಿನ ಮನೆಯೊಂದು ಹಾಗೆಯೇ ಜಾರಿ ನೆಲಕ್ಕುರುಳಿತು. ಮಕ್ಕಂದೂರೆಂಬ ಬೆಟ್ಟದ ಮೇಲಿದ್ದ ಸುಂದರ ಹಳ್ಳಿಯೊಂದು ಕುಸಿದು ನಾಮಾವಶೇಷಗೊಂಡಿತು….!

Advertisement
Advertisement
Advertisement
Advertisement

ಶತಮಾನಗಳಿಂದ ಹಿರಿಯರ ಶ್ರಮದಿಂದ ರೂಪುಗೊಂಡಿದ್ದ ಸಣ್ಣ ಸಣ್ಣ ಹಳ್ಳಿಗಳು ಕುಸಿದ ಬೆಟ್ಟಗುಡ್ಡಗಳಡಿಗೆ, ಹರಿದ ಪ್ರವಾಹದೊಳಗೆ ನುಸುಳಿಹೋಯಿತು. ಸಾವಿರಾರು ಕುಟುಂಬಗಳು ಸೂರು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯವನ್ನು ಪಡೆದುಕೊಂಡವು.

Advertisement

 


ರಭಸದಿಂದ ಸುರಿಯುತ್ತಿದ್ದ ಮಳೆಯಲ್ಲಿಯೇ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಡಿಗಳಲ್ಲಿ ನಿರಾಶ್ರಿತರನ್ನು ಕರೆತಂದು ಕ್ಯಾಂಪ್ ಗಳಲ್ಲಿ ಇಳಿಸಲಾಗುತ್ತಿತ್ತು.ಚಳಿಯಲ್ಲಿ ನಡುಗುತ್ತಿದ್ದ ಹಸುಗೂಸುಗಳು,ವೃದ್ಧರು ಒಂದೆಡೆಯಾದರೆ,ಆಸ್ತಿ-ಪಾಸ್ತಿಗಳನು ಕಳೆದುಕೊಂಡ ನೋವಿನಲ್ಲಿ ಉಳಿದವರು!

Advertisement

ಕೊಡಗಿನ ಸಂಕಷ್ಟದಲ್ಲಿ ಎಲ್ಲೆಲ್ಲೋ ಇದ್ದವರು ಎಲ್ಲರೊಳಗೊಂದಾಗಿದ್ದರು. ಸಂತ್ರಸ್ತರಿಗೆ
ರಾತ್ರೋ ರಾತ್ರಿ ದೇಶದೆಲ್ಲೆಡೆಯಿಂದ ಆಹಾರ ಸಾಮಾಗ್ರಿಗಳು ಹರಿದು ಬಂದಿದ್ದವು. ಸಹಸ್ರ ಸಹಸ್ರ ಕೈಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದವು.ರಾತ್ರಿ ಹಗಲೆನ್ನದೆ ನಿದ್ದೆ ಬಿಟ್ಟು ಸಂತ್ರಸ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಏನೂ ಮಾಡಲಾಗದ ಅಸಹಾಯಕತೆಯೇ ನನ್ನನ್ನು ಏನಾದರೂ ಮಾಡುವಂತೆ ಪ್ರೇರೇಪಿಸಿತು.

(ಚಿತ್ರ ಕೃಪೆ : ವರುಣ್ ಸುಳ್ಯ)

ಸೋಷಿಯಲ್ ಮೀಡಿಯಾಗಳಲ್ಲಿ ಅಷ್ಟೇನು ಸಕ್ರಿಯವಾಗಿರದಿದ್ದ ನಾನು ಫೇಸ್ಬುಕ್ ನಲ್ಲಿ ಸಹಾಯಕ್ಕಾಗಿ ಹಾಕಿದ ಒಂದು ಬರಹಕ್ಕೆ ಸಿಕ್ಕಿದ ಸ್ಪಂದನೆ ಅದ್ಭುತ. ಸಹಾಯವಾಣಿಯೆಂದು ಹಂಚಿಕೊಂಡಿದ್ದ ನನ್ನ ಎರಡು ಮೊಬೈಲ್ ನಂಬರ್ ಗಳು ಎರಡು ಗಂಟೆಯ ರಾತ್ರಿ ಯವರೆಗೂ ರಾಜ್ಯ ದೆಲ್ಲೆಡೆಯಿಂದ ಕರೆ, ಸಂದೇಶಗಳನ್ನು ಸ್ವೀಕರಿಸುತ್ತಿತ್ತು.ಸಂತ್ರಸ್ತರ ಅಗತ್ಯವನ್ನು ಪೂರೈಸುವಂತೆ ದೊಡ್ಡ ಮೊತ್ತದ ಹಣ ನನ್ನ ಖಾತೆಗೆ ಜಮಾವಣೆಯಾಗಿತ್ತು. ಆಂಧ್ರಪ್ರದೇಶದ ಒಂದು ಶಾಲೆಯಿಂದ ಪುಟ್ಟ ಮಕ್ಕಳು ಸ್ಟ್ರೀಟ್ ವಾಕ್ ಮಾಡಿ ಅಂಗಡಿಗಳಿಂದ ಸಂಗ್ರಹಿಸಿದ ಹಣವೂ ಇದರಲ್ಲಿ ಸೇರಿತ್ತು. ದೈನಂದಿನ ದುಡಿಮೆಯ ಕೆಲಸಗಾರರು ತಮ್ಮ ಕೈಲಾದ ಹಣವನ್ನು ವರ್ಗಾಯಿಸಿದ್ದರು. ಕೆಲವರು ಹುಟ್ಟು ಹಬ್ಬ ಆಚರಿಸುವ ಹಣವನ್ನು ಸಂತ್ರಸ್ತರಿಗೆ ನೀಡಿದ್ದರು. ಅಚ್ಚರಿಯೆಂದರೆ ಬಹುತೇಕರು ‘ಈ ಹಣ ಯಾವ ಮೂಲದಲ್ಲಾದರೂ ಸಂತ್ರಸ್ತರ ನ್ನು ತಲುಪಲಿ..ನಮ್ಮ ಹೆಸರೆಲ್ಲೂ ಬಹಿರಂಗಪಡಿಸದಿರಿ ‘ ಎಂದಿದ್ದರು..! .

Advertisement

ಪ್ರತಿದಿನ ಜಮಾ ಆಗಿರುತ್ತಿದ್ದ ಹಣದಿಂದ ನಿರಾಶ್ರಿತರ ಕೇಂದ್ರದಲ್ಲಿದ್ದ ಸಂತ್ರಸ್ತರ ಅವಶ್ಯಕತೆಗಳನ್ನು ಅರಿತು ಅವರಿಗೆ ಬೇಕಾದುದನ್ನು ಕೊಡಿಸಿ ಖರ್ಚಾದ ಮೊತ್ತದ ವಿವರಗಳನ್ನು ಬಿಲ್ ಸಮೇತ ಫೇಸ್ ಬುಕ್ ಗೋಡೆಯಲ್ಲಿ ಪೋಸ್ಟ್ ಮಾಡಿರುತ್ತಿದ್ದೆ. ಸಾರ್ವಜನಿಕರ ದುಡಿಮೆ ಎಲ್ಲೂ ವ್ಯರ್ಥ ವಾಗದಂತೆ ಮತ್ತು ಪಾರದರ್ಶಕ ವಾಗಿರುವಂತೆ ನೋಡಿಕೊಂಡಿದ್ದೆ.  ಆಳುತ್ತಿರುವ ವರ್ಗವು ಇಂತಹದೊಂದು ಸಾಧ್ಯತೆಯನ್ನು ಅಳವಡಿಸಿಕೊಂಡು ಜನತೆಗೆ ಪಾರದರ್ಶಕ ಆಡಳಿತ ಕೊಡಲು ಸಾಧ್ಯವಾಗುವುದಿಲ್ಲವೇ?.

ಭೂ ಕುಸಿತಗೊಂಡ ಕೊಡಗಿನ ಹಳ್ಳಿ- ಹಳ್ಳಿಗೆ ಭೇಟಿಕೊಟ್ಟಿದ್ದೆ. ನಗರದಿಂದ ಕೆಲವೇ ಕಿಲೋಮೀಟರ್ ಗಳಷ್ಟೇ ದೂರದಲ್ಲಿದ್ದರೂ ಮೂಲಭೂತ ಸೌಕರ್ಯ ಗಳಿಂದ ವಂಚಿತರಾಗಿ ಬದುಕುತ್ತಿರುವ ಜೀವಗಳ ಒಂದಷ್ಟು ಅವಶ್ಯಕತೆಗಳನ್ನು ಪೂರೈಸಿದಾಗ ಹಿರಿಯ ಜೀವಗಳು ತಲೆಮುಟ್ಟಿ ‘ ನಿಮ್ಮ ಮಕ್ಕಳಿಗೆ ಒಳ್ಳೆಯದಾಗಲಿ ‘ ಎನ್ನುತ್ತಿದ್ದರು.ಬದುಕು ನೆಲೆ ನಿಂತಿರುವುದು ,ಭೂಮಿ ಇನ್ನೂ ಹಸಿರಾಗಿರುವುದು ಇಂತಹ ನಂಬಿಕೆಗಳಿಂದಲೇ ಅಲ್ಲವೇ? ನಾವು ಒಳ್ಳೆಯದು ಮಾಡಿದರೆ ,ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂದು ನಮ್ಮ ಹೆತ್ತವರು..ಅವರಿಂದ ಅದೇ ಸಂಸ್ಕಾರವನ್ನು ಕಲಿತ ನಾವು..ನಮ್ಮಿಂದ ನಮ್ಮ ಮಕ್ಕಳು..!!

Advertisement

‘ನೀವ್ಯಾಕೆ ಇದನ್ನೆಲ್ಲಾ ಮಾಡುತ್ತಿದ್ದೀರಿ? ಕೆಲವರು ನನ್ನನ್ನು ಕೇಳಿದ್ದರು! ‘ನನಗೇನು ನಿರೀಕ್ಷೆಯಿತ್ತು’? ‘ನನಗೆ ಗುರುತು ಪರಿಚಯವೂ ಇಲ್ಲದ ,ಕೊಡಗಿಗೆ ಸಂಬಂಧಪಡದ ಹಲವರೇಕೆ ನನ್ನ ಜೊತೆ ಕೈಜೋಡಿಸುತ್ತಿದ್ದಾರೆ.? ನನ್ನನ್ನು ನಾನೇ ಕೇಳಿಕೊಂಡೆ!
ಸಾವಿರ ಸಾವಿರ ಜನರು ಸ್ವಯಂ ಪ್ರೇರಿತರಾಗಿ ಸಂತ್ರಸ್ತ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದ ಶಕ್ತಿ ಯಾವುದು?!

ಇಡೀ ಬ್ರಹ್ಮಾಂಡದ ಅಸ್ತಿತ್ವ ಮತ್ತು ಕ್ರಿಯೆಗೆ ಕಾರಣವಾಗಿರುವ ಮೂಲಸ್ವರೂಪ ಪ್ರಕೃತಿ.ಇದನ್ನೇ ಭಗವದ್ಗೀತೆಯಲ್ಲಿ ಮೂಲಭೂತ ಪ್ರೇರಕ ಶಕ್ತಿ ಎಂದಿದ್ದಾರೆ.ನಾವು ವಿಮುಖವಾಗಿ ನಡೆದಷ್ಟೂ.. ಪೃಕೃತಿ ತನ್ನ‌ದೆಡೆಗೆ ಎಲ್ಲರನ್ನೂ, ಎಲ್ಲವನ್ನೂ ಸೆಳೆದುಕೊಳ್ಳುತ್ತಲೇ.. ತನ್ನ ಕೇಂದ್ರದಲ್ಲಿ ಒಂದುಗೂಡಿಸಿ ತನ್ನೊಡಲೇ ಸತ್ಯವೆಂಬ ಕರೆ ಕೊಡುತ್ತದೆ.. ನಾವು ಅರಿವಿಲ್ಲದೆ ಓಗೊಡುತ್ತಿರುತ್ತೇವೆ..! ಇದುವೇ ಮನುಕುಲದ ಅಗಾಧತೆ!

Advertisement

ವಿಶ್ವದ ಯಾವುದೋ ಮೂಲೆಯಲ್ಲಿ ಜರುಗಿದ ಅನಾಹುತ, ಅದೆಷ್ಟೋ ಲಕ್ಷ ಕಿಲೋಮೀಟರ್ ಗಳಷ್ಟು ದೂರವಿರುವ ನಮ್ಮನ್ನೂ ಅರೆಕ್ಷಣ ತಲ್ಲಣಗೊಳಿಸುವುದರ ಹಿಂದಿರುವ ರಹಸ್ಯ ಇದು. ಸಮಾಜದಲ್ಲಿ ನಾವೇ ಹುಟ್ಟು ಹಾಕಿಕೊಂಡ ಘನತೆ-ಗೌರವಗಳು, ಅಹಂ-ಪ್ರತಿಷ್ಠೆಗಳನ್ನೆಲ್ಲ ಕಳಚಿ ಬದುಕಿನಾಚೆಗಿನ ಪರಿಧಿಯಲ್ಲೊಮ್ಮೆ ನಿಂತು ನೋಡಿದಾಗ ‘ಈ ಸರಳ ,ಸುಂದರ ಬದುಕನ್ನು ನಾವ್ಯಾಕೆ ಇಷ್ಟೊಂದು ಜಟಿಲಗೊಳಿಸಿದ್ದೇವೆ ಎಂದು ಅನ್ನಿಸಿಬಿಡುತ್ತದೆ ಅಲ್ಲವೇ?

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು
December 26, 2024
11:10 AM
by: ಡಾ.ಚಂದ್ರಶೇಖರ ದಾಮ್ಲೆ
ಜನರಿಗೆ ದುಡಿದು ತಿನ್ನಲು ಬಿಡಿ, ಬೇಡ ಸಬ್ಸಿಡಿ
December 17, 2024
8:17 PM
by: ಡಾ.ಚಂದ್ರಶೇಖರ ದಾಮ್ಲೆ
ನಾಚಿಕೆ ಏತಕೆ?
December 11, 2024
9:57 PM
by: ಡಾ.ಚಂದ್ರಶೇಖರ ದಾಮ್ಲೆ
ವಿಶ್ವಾಸದ ಗ್ಯಾರಂಟಿ ಇಲ್ಲದ ಪ್ರೇಮ
December 3, 2024
9:17 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror